ಬಳ್ಳಾರಿ:ಜಿಲ್ಲೆಯ ಕಂಪ್ಲಿ ಸಮೀಪದ ಮಣ್ಣೂರು ಹಾಗೂ ಸೂಗೂರು ಗ್ರಾಮದಲ್ಲಿ ಕಳೆದೊಂದು ವಾರದಿಂದ ಕೋತಿಗಳ ಕಾಟ ಹೆಚ್ಚಾಗಿದ್ದು, ಗ್ರಾಮಸ್ಥರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳು, ವೃದ್ಧರು, ಕಿರಾಣಿ ಅಂಗಡಿಗಳ ಮಾಲೀಕರಿಗೆ ತೊಂದರೆ ಕೊಡುತ್ತಿರುವುದಲ್ಲದೇ ಹಲವರ ಕೈ, ಕುತ್ತಿಗೆ, ತಲೆ ಭಾಗಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿವೆ.
ಸೂಗೂರು, ದೊಡ್ಡರಾಜ ಕ್ಯಾಂಪ್, ಇಟಗಿ, ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ವೃದ್ಧರು ಸೇರಿದಂತೆ 40ಕ್ಕೂ ಹೆಚ್ಚು ಜನರು ಕೋತಿಗಳ ಕಡಿತಕ್ಕೆ ಒಳಗಾಗಿದ್ದಾರೆ. ಕೋತಿ ಹಾವಳಿಯಿಂದ ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. ದೊಡ್ಡರಾಜ ಕ್ಯಾಂಪ್‌ನಲ್ಲಿ ವೃದ್ಧರೊಬ್ಬರಿಗೆ ಕೋತಿ ಕಚ್ಚಿದ್ದು, ಅವರ ತಲೆಗೆ 10 ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಇನ್ನು, ಸೂಗೂರು ಗ್ರಾಮದ ಹಲವು ಕಿರಾಣಿ ಅಂಗಡಿಗಳಿಗೆ ಕೋತಿಗಳು ನುಗ್ಗಿ ದವಸ-ಧಾನ್ಯ, ತಿಂಡಿ-ತಿನಿಸುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಕೋತಿಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ತೋಟ, ಗದ್ದೆಗಳಲ್ಲಿ ಒಬ್ಬರೂ ತಿರುಗಾಡುವಂತಿಲ್ಲ. ಮಹಿಳೆಯರು, ಮಕ್ಕಳ ಮೇಲೆರಗಿ ಕೋತಿಗಳು ದಾಳಿ ಮಾಡುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೋತಿಗಳನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಆದಷ್ಟು ಶೀಘ್ರ ಅಧಿಕಾರಿಗಳು ಕೋತಿಗಳನ್ನು ಸೆರೆ ಹಿಡಿದು ಗ್ರಾಮಸ್ಥರ ನೆರವಿಗೆ ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಮಂಗಗಳ ದಾಳಿಗೆ ಗ್ರಾಮಸ್ಥರ ಹೈರಾಣ: 3 ಕುರಿ ಮರಿಗಳನ್ನು ಕೊಂದು ಹಾಕಿದ ವಾನರ ಸೇನೆ!