ಬಳ್ಳಾರಿ :ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಯಡಿ ಕೂಲಿ ಕೆಲಸ ನೀಡುವಲ್ಲಿ ಜಿಲ್ಲೆ ಸಾಕಷ್ಟು ಪ್ರಗತಿ ಸಾಧಿಸಿದೆ. ಇಂಗು ಗುಂಡಿ (ಸೋಕ್ ಪಿಟ್) ನಿರ್ಮಾಣ ಅಭಿಯಾನದ ಮೂಲಕ ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ ತಿಳಿಸಿದ್ದಾರೆ.
ನರೇಗಾ ಮೂಲಕ ಇಂಗು ಗುಂಡಿ ನಿರ್ಮಾಣ; ರಾಜ್ಯದಲ್ಲೇ ಬಳ್ಳಾರಿ ಪ್ರಥಮ - Soak pit construction Campaign in Bellary under Narega scheme
ನರೇಗಾ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 13 ಸಾವಿರಕ್ಕೂ ಅಧಿಕ ಇಂಗು ಗುಂಡಿಗಳನ್ನ ನಿರ್ಮಿಸಲಾಗಿದೆ. ಈ ಮೂಲಕ ಜಿಲ್ಲೆ ಇಂಗು ಗುಂಡಿ ನಿರ್ಮಾಣ ಅಭಿಯಾನದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.
ನರೇಗಾ ಯೋಜನೆಯಡಿ ಸಾಕಷ್ಟು ಕೂಲಿ ಕೆಲಸ ನೀಡುವ ಮೂಲಕ ಅತೀ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವಲ್ಲಿ ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನ ಬಂದಿದೆ. ಲಾಕ್ ಡೌನ್ ಸಂದರ್ಭದಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ನರೇಗಾ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಲಾಕ್ ಡೌನ್ ವೇಳೆ ಮಹಾನಗರಗಳಿಂದ ಕೆಲಸ ಬಿಟ್ಟು ಬಂದ ಪದವೀಧರರಿಗೂ ಕೂಡ ಈ ಯೋಜನೆ ಆಸರೆಯಾಗಿತ್ತು. ಈಗ ಏಕಾಏಕಿ ಕೆಲಸದ ಪ್ರಮಾಣ ಕುಸಿದಿದ್ದರಿಂದ ರಾಜ್ಯ ಸರ್ಕಾರ ಮತ್ತೊಂದು ವಿನೂತನ ಅಭಿಯಾನಕ್ಕೆ ಚಾಲನೆ ನೀಡಿ, ನಿರ್ದಿಷ್ಟ ಗುರಿ ನಿಗದಿಪಡಿಸಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಇಂಗು ಗುಂಡಿಗಳ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರ್ಕಾರ ನಿರ್ದಿಷ್ಟ ಗುರಿ ನಿಗದಿಪಡಿಸಿದೆ. ಈಗಾಗಲೇ 13 ಸಾವಿರಕ್ಕೂ ಅಧಿಕ ಇಂಗು ಗುಂಡಿಗಳನ್ನ ನಿರ್ಮಿಸಲಾಗಿದೆ. ಅಂದಾಜು ಶೇ 118 ರಷ್ಟು ಗುರಿಯನ್ನು ತಲುಪಿದ್ದೇವೆ. ಈ ಮೂಲಕ ಬಚ್ಚಲು ಗುಂಡಿಗಳ ನಿರ್ಮಾಣ ಕಾರ್ಯದಲ್ಲೂ ಕೂಡ ಜಿಲ್ಲೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.