ಬಳ್ಳಾರಿ:ಕಾಂಗ್ರೆಸ್ ಮಾಜಿ ಶಾಸಕ ಹೆಚ್. ಅನಿಲ್ ಲಾಡ್ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿರುವ ಬಗ್ಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಲು ನಿರಾಕರಿಸಿದ್ರು.
ಕಳೆದೊಂದು ವಾರದಿಂದ ಸುರಿದ ವಿಪರೀತ ಮಳೆಯಿಂದಾಗಿ ಜಲಾವೃತವಾಗಿದ್ದ ಬಳ್ಳಾರಿಯ ಹನುಮಾನ್ ನಗರದ ತಗ್ಗು-ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ಗಾಲಿ ಸೋಮಶೇಖರ್ ರೆಡ್ಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರೆ, ಈ ವೇಳೆ ಮಾಜಿ ಶಾಸಕ ಲಾಡ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರಶ್ನಿಸಿದಾಗ, ಆ ಬಗ್ಗೆ ತನಗೇನು ತಿಳಿದಿಲ್ಲ ಎಂದರು. ಜೊತೆಗೆ ರಾಜಕೀಯ ಸಂಬಂಧಿತ ವಿಚಾರಗಳನ್ನು ಮಾತನಾಡಲು ನಿರಾಕರಿಸಿದರು.
ಅಖಂಡ ಜಿಲ್ಲೆಗೆ ನನ್ನ ಸಹಮತವಿದೆ:ಅನರ್ಹ ಶಾಸಕ ಆನಂದಸಿಂಗ್ ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಕೂಗನ್ನು ಎಬ್ಬಿಸಿರೋದಕ್ಕೆ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮಣೆ ಹಾಕಬಾರದು. ಆನಂದಸಿಂಗ್ ಅವರೊಬ್ಬರ ರಾಜೀನಾಮೆಯಿಂದಾಗಿ ಈ ರೀತಿಯ ನಿರ್ಧಾರ ತಳೆಯಬಾರದೆಂದು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದೇವೆ. ಆದರೀಗ ಮತ್ತೆ ಈ ವಿಚಾರ ಮುನ್ನಲೆಗೆ ಬಂದಿರೋದು ತರವಲ್ಲ ಎಂದಿದ್ದಾರೆ.
ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ.. ಪ್ರತ್ಯೇಕ ಜಿಲ್ಲೆಯ ರಚನೆ ವಿಚಾರ ಕುರಿತು ಚರ್ಚಿಸಲು ಕೂಡಲೇ ಸಿಎಂ ಶಾಸಕರ ಸಭೆ ಕರಿಬೇಕು. ಹಾಗೂ ಜಿಲ್ಲೆಯಿಂದ ನಾಲ್ವರು ಶಾಸಕರಾದ ಗೋಪಾಲಕೃಷ್ಣ, ಸೋಮಲಿಂಗಪ್ಪ, ಕರುಣಾಕರರೆಡ್ಡಿ ಹಾಗೂ ನಾನು ಬಿಜೆಪಿಯಿಂದ ಗೆಲುವು ಸಾಧಿಸಿದ್ದೇವೆ. ನಮ್ಮ ನಾಲ್ವರು ಶಾಸಕರ ಅಭಿಪ್ರಾಯವನ್ನು ಮೊದಲು ಪರಿಗಣಿಸಬೇಕು ಎಂದರು. ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಸೋದೇ ನಮ್ಮ ಮೊದಲ ಗುರಿ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪನವರು ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಆ ಮೇಲೆ ಜಿಲ್ಲೆಯ ಇಬ್ಭಾಗದ ಕುರಿತು ಸೂಕ್ತ ನಿರ್ಧಾರವನ್ನು ಪ್ರಕಟಿಸಬೇಕು ಎಂದರು.
ಈಗಾಗಲೇ ರಾಜ್ಯ ಸರ್ಕಾರ ಕೊಪ್ಪಳ, ಯಾದಗಿರಿಯನ್ನು ಜಿಲ್ಲೆಗಳನ್ನಾಗಿ ಘೋಷಿಸಿದೆ. ಹಾಗಂತ ಕೇವಲ ಡಿಸಿ ಕಚೇರಿ ಸೇರಿ ಇನ್ನಿತರೆ ಕಚೇರಿಗಳು ಕಾರ್ಯನಿರ್ವಹಿಸದರೆ ಸಾಲದು. ಅಭಿವೃದ್ಧಿ ದೃಷ್ಠಿಕೋನದಲ್ಲಿ ನೋಡೋದಾದ್ರೆ ಪ್ರತ್ಯೇಕ ಜಿಲ್ಲೆಗಳಾದ ಮೇಲೆ ಆ ಜಿಲ್ಲೆಗಳಲ್ಲಿ ಶೂನ್ಯ ಸಾಧನೆಯಾಗಿದೆ ಎಂದಿದ್ದಾರೆ ಶಾಸಕ ರೆಡ್ಡಿ.
ಹಂಪಿ ಉತ್ಸವ ಮಾಡಲೇ ಬೇಕು: ಈ ಬಾರಿಯ ನವೆಂಬರ್ ತಿಂಗಳಲ್ಲಿ ಹಂಪಿ ಉತ್ಸವವನ್ನು ಮಾಡಲೇಬೇಕು. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರ ಗಮನಕ್ಕೂ ತರುವೆ. ಹಾಗೊಂದು ವೇಳೆ ಹಂಪಿ ಉತ್ಸವ ಆಚರಣೆಗೆ ಹಿಂದೇಟು ಹಾಕಿದ್ರೆ, ಕಳೆದ ಬಾರಿ ಏನೇನು ಹೋರಾಟ ಕೈಗೊಂಡಿದ್ದೆವೋ.. ಅದೇ ಮಾದರಿ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.