ಬಳ್ಳಾರಿ:ಬಳ್ಳಾರಿ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿ ಅಡಿಯಲ್ಲಿ 100 ಕೋಟಿ ರೂ. ಕಾಯ್ದಿರಿಸಿ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರಿಗೆ ಮನವಿ ಮಾಡಿದ್ದಾರೆ.
ಕಲಬುರಗಿಯ ಕೆಕೆಆರ್‍ಡಿಬಿ ಕಚೇರಿಯಲ್ಲಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಅವರನ್ನು ಶುಕ್ರವಾರ ಭೇಟಿಯಾಗಿ ಮನವಿ ಸಲ್ಲಿಸಿರುವ ಶಾಸಕ ಸೋಮಶೇಖರ ರೆಡ್ಡಿ ಅವರು, ಬಳ್ಳಾರಿ ನಗರವು ಕೈಗಾರಿಕೆ ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಅತ್ಯಂತ ಕ್ಷೀಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ಹಿಂದೆ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಸಂಗನಕಲ್ಲು, ಸಿರಿವಾರ ಮತ್ತು ಚಾಗನೂರು ಗ್ರಾಮಗಳಲ್ಲಿ ಸುಮಾರು 600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲದೇ ಸರ್ಕಾರವು ರೈತರಿಗೆ ಕಾನೂನುರೀತ್ಯಾ ಭೂ ಪರಿಹಾರ ಸಹ ನೀಡಲಾಗಿರುತ್ತದೆ. ಭೂ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡ ಉದ್ದೇಶಕ್ಕಲ್ಲದೆ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದೆಂದು ಸರ್ಕಾರದ ನಿಯಮಕ್ಕೆ ಅನುಗುಣವಾಗಿ ಈ ಯೋಜನೆಯ ಪುನರ್ ಸಮೀಕ್ಷೆ ಆಗಿದೆ ಎಂಬುದನ್ನು ಕೆಕೆಆರ್‍ಡಿಬಿ ಅಧ್ಯಕ್ಷ ರೇವೂರ್ ಅವರ ಗಮನಕ್ಕೆ ಶಾಸಕ ಸೋಮಶೇಖರರೆಡ್ಡಿ ಅವರು ತಂದರು.