ಬಳ್ಳಾರಿ:ಕೊರಚ ಸಮುದಾಯದ ಜನರನ್ನು ಅವಾಚ್ಯವಾಗಿ ನಿಂದಿಸಿ ವಿವಾದಕ್ಕೆ ಗುರಿಯಾಗಿದ್ದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರು ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಶಾಸಕರು ಹಡಗಲಿ ತಾಲೂಕಿನ ತಳಕಲ್ಲು ಗ್ರಾಮದ ಹೊರವಲಯದ ಕುಡಿಯುವ ನೀರಿನ ಕೆರೆ ಭರ್ತಿ ಮಾಡದೇ ಇರುವ ಆರೋಪ ಎದುರಿಸುತ್ತಿದ್ದಾರೆ.
ಇಡೀ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳು ತುಂಬಿ ಪ್ರವಾಹದ ಭೀತಿ ಎದುರಾಗಿದೆ. ಗಣಿನಾಡು ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯ ಸುತ್ತ ಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಜಿಲ್ಲೆಯ ಹಡಗಲಿ ತಾಲೂಕಿನ ತಳಕಲ್ಲು ಗ್ರಾಮದ ಹೊರ ವಲಯದ ಕುಡಿವ ನೀರಿನ ಕೆರೆ ಭರ್ತಿ ಮಾಡದಿರುವುದಕ್ಕೆ ಗ್ರಾಮಸ್ಥರು ತೊಟ್ಟು ನೀರಿಗೂ ಪರದಾಡುತ್ತಿದ್ದಾರೆ.
ಕೆರೆ ಭರ್ತಿಗೆ ಹಿಂದೇಟು ಹಾಕುತ್ತಿರುವ ಶಾಸಕ ಗ್ರಾಮದ ಜನರು ತಮಗೆ ಮತ ಹಾಕಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಕುಡಿಯಲು ನೀರು ಕೂಡ ದೊರಕದಂತೆ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ಕ್ಷೇತ್ರದಲ್ಲಿರುವ ಹತ್ತಾರು ಕರೆಗಳು ತುಂಬಿ ತುಳುಕುತ್ತಿವೆ ಆದರೆ ತಳಕಲ್ಲು ಗ್ರಾಮದ ಪಕ್ಕದಲ್ಲಿರುವ ಈ ಕರೆಗೆ ತೊಟ್ಟು ನೀರು ಸಹ ಬಿಟಿಲ್ಲ. ಕಳೆದ ಚುನಾವಣೆಯಲ್ಲಿ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ ತನಗೆ ಮತ ಹಾಕಿಲ್ಲವೆಂದು ಕರೆಗೆ ನೀರು ಬಿಡುತ್ತಿಲ್ಲ ಎಂದು ಗ್ರಾಮಸ್ಥ ಚಂದ್ರಪ್ಪ ದೂರಿದ್ದಾರೆ.
ಗ್ರಾಮದ ಜನರೆಲ್ಲರೂ ಒಗ್ಗೂಡಿ ಅನೇಕ ಬಾರಿ ಶಾಸಕರ ಬಳಿ ಹೋಗಿ ನಮ್ಮೂರಿನ ಕೆರೆಗೆ ನೀರು ಬಿಡುವಂತೆ ಮನವಿ ಮಾಡಿದ್ರೂ, 'ನೀವ್ ಯಾರಿಗೆ ವೋಟ್ ಹಾಕಿದ್ದೀರಿ ಅವರನ್ನೇ ಕೇಳಿ" ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದ್ದಾರಂತೆ. ಹೀಗಾಗಿ, ಜನ ತುಂಗಭದ್ರ ಜಲಾಶಯ ತುಂಬಿ ತುಳುಕುತ್ತಿದ್ದರೂ ಹನಿ ನೀರಿಗೂ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಕೆರೆಯನ್ನು ತುಂಬಿಸಿದ್ರೆ ಗ್ರಾಮಕ್ಕೆ ಹೊಂದಿಕೊಂಡಿರುವ ಹತ್ತಾರು ಹಳ್ಳಿಗಳಿಗೆ ನೀರಿ ಸಿಗುತ್ತೆ. ಹೀಗಿದ್ದರೂ ಶಾಸಕರು ಮಾತ್ರ ನೀರು ಬಿಡಲು ರಾಜಕಾರಣ ಮಾಡುತಿದ್ದಾರೆಂದು ಗ್ರಾಮಸ್ಥರಾದ ರಾಮಣ್ಣ, ಚನ್ನಬಸಪ್ಪ ದೂರಿದ್ದಾರೆ.
ಕಂದೀಲಿನ ಕೆಳಗೆಡೆ ಕತ್ತಲೆ ಎನ್ನುವ ಹಾಗೆ ಈ ಗ್ರಾಮದ ಪರಿಸ್ಥಿತಿ ಆಗಿದೆ. ಪಕ್ಕದಲ್ಲಿ ತುಂಗಭದ್ರ ಜಲಾಶಯದ ಹಿನ್ನೀರಿನ ಪ್ರದೇಶ ಇದ್ದರೂ ಈ ಗ್ರಾಮದ ಜನರಿಗೆ ಮಾತ್ರ ಹನಿ ನೀರು ಸಿಗುತ್ತಿಲ್ಲ.
ಕೇವಲ ಈ ಗ್ರಾಮದ ಜನರು ಚುನಾವಣೆಯಲ್ಲಿ ತನಗೆ ವೋಟ್ ಹಾಕಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ನೀರು ಬಿಡದೇ ಇರುವುದು ಎಷ್ಟು ಸರಿ? ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಇದು ಮೂಲಭೂತ ಹಕ್ಕಾಗಿದ್ದು, ಸಂವಿಧಾನದ ಪರಿಧಿಯಲ್ಲಿ ಬರುತ್ತೆ. ಕುಡಿಯುವ ನೀರಿನ ವಿಚಾರದಲ್ಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ಈ ರೀತಿಯಾಗಿ ನಡೆದುಕೊಳ್ಳೋದು ಸಂವಿಧಾನ ವಿರೋಧಿಯಾಗಿದೆ ಎಂದು ಗಣಿಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.