ಬಳ್ಳಾರಿ:ಪ್ರಚೋದನಕಾರಿ ಭಾಷಣದ ಆರೋಪ ಹೊತ್ತಿರುವ ಶಾಸಕ ಸೋಮಶೇಖರ ರೆಡ್ಡಿಯವ್ರಿಗೆ ಮಾನ, ಮರ್ಯಾದೆ ಇಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿಂದು ಮುಂಜಾಗ್ರತ ಕ್ರಮವಾಗಿ ಬಂಧಿಸಿದ್ದ ಜಿಲ್ಲಾ ಪೊಲೀಸರು, ಜಮೀರ್ ಅವರನ್ನು ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಹತ್ತು ದಿನದೊಳಗೆ ಶಾಸಕ ಸೋಮಶೇಖರ ರೆಡ್ಡಿ ಅವರನ್ನ ಬಂಧಿಸಬೇಕು. ಇಲ್ಲವಾದ್ರೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಅವರಿಗೆ ಮಾನ, ಮರ್ಯಾದೆ ಇಲ್ಲ. ಆ ಎರಡು ಇದ್ದವರು ಕ್ಷಮೆ ಕೇಳುತ್ತಾರೆ. ಕ್ಷಮೆ ಕೇಳೋದಕ್ಕೆ ಮುಂಚೆ ಅವರನ್ನ ಬಂಧಿಸಬೇಕು. ಬಳ್ಳಾರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹೀಗಾಗಿ, ಅವರನ್ನ ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರಿಗೆ ಮನವಿ ಮಾಡಿರುವೆ. ಅವರೇನಾದ್ರೂ ಬಂಧಿಸದೇ ಹೋದ್ರೆ ಉಗ್ರ ಹೋರಾಟ ನಡೆಸಲು ನಿರ್ಧರಿಸುವೆ. ನಮ್ಮ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದಿಯಾಗಿ ಇಲ್ಲಿಗೆ ಬಂದು ಪ್ರತಿಭಟನೆ ನಡೆಸಲಾಗುವುದು ಎಂದರು.
ನಾನು ಈ ದಿನ ಬಳ್ಳಾರಿಗೆ ಬರುವುದಾಗಿ ತಿಳಿಸಿದ್ದೆ. ಅದರಂತೆ ಬಂದಿದ್ದೇನೆ. ಶಾಂತಿ ಕದಡುವ ನೆಪವೊಡ್ಡಿ ನನ್ನನ್ನ ಕುಡಿತಿನಿ ಬಳಿಯ ವೇಣಿ ವೀರಾಪುರ ಬಳಿ ಬಂಧಿಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದರು.