ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆ ವೇಳೆ ನಡೆದ ಕೆಲ ಅಹಿತಕರ ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರಿಗೆ ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ದೂರು ನೀಡಿದ್ದಾರೆ.
ಈ ಸಂಬಂಧ ಇಲ್ಲಿನ ಕನಕದುರ್ಗಮ್ಮ ದೇಗುಲದ ಬಳಿಯಿರುವ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಗೆ ಭೇಟಿ ನೀಡಿರುವ ಶಾಸಕ ಭೀಮಾನಾಯ್ಕ್, ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವೇಳೆ ಅಲ್ಲಿನ ಪೊಲೀಸ್ ಅಧಿಕಾರಿಗಳು ನಡೆದುಕೊಂಡ ರೀತಿ ಹಾಗೂ ಬಿಜೆಪಿ ಕಾರ್ಯಕರ್ತರ, ಮುಖಂಡರ ಗೂಂಡಾವರ್ತನೆಯ ಕುರಿತು ಮೌಖಿಕ ದೂರು ನೀಡಿದ್ದಾರೆ.
ಹಗರಿ ಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಅವರು, ಬಿಜೆಪಿಯವರ ಗೂಂಡಾಗಿರಿ ಜಾಸ್ತಿಯಾಗಿದೆ. ನಾನೊಬ್ಬ ಜನಪ್ರತಿನಿಧಿ ಎಂಬುದನ್ನು ಲೆಕ್ಕಿಸದೇ ನನ್ನ ಮೇಲೆ ಹಾರಿ ಬಂದು ಹೊಡೆಯಲಿಕ್ಕೆ ಪ್ರಯತ್ನಿಸುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಏನ್ ಬೇಕಾದ್ರೂ ಮಾಡ್ಬಹುದಾ? ಶಾಸಕರನ್ನ ರಕ್ಷಣೆ ಮಾಡೋರು ಯಾರು? ನಮ್ಮ ಪಕ್ಷದ ಕಾರ್ಯಕರ್ತರನ್ನ ಹಾಗೂ ಪುರಸಭೆ ಸದಸ್ಯರನ್ನ ರಕ್ಷಣೆ ಮಾಡೋರು ಯಾರೆಂಬ ಪ್ರಶ್ನೆಯು ಇಲ್ಲಿ ಉದ್ಭವಿಸಿದೆ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೂ ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ತಿರುಪತಿಗೆ ಹೋಗಿದ್ದ ಪಕ್ಷೇತರ ಸದಸ್ಯನ ಹೈಜಾಕ್ಗೆ ಯತ್ನ:ಬಿಜೆಪಿ ಗುಂಡಾಗಳಿಂದ ತಿರುಪತಿ ತಿಮ್ಮಪ್ಪನ ದರುಶನ ಭಾಗ್ಯ ಪಡೆಯೋದಕ್ಕೆ ಹೋಗಿದ್ದ ಪಕ್ಷೇತರ ಸದಸ್ಯನ ಹೈಜಾಕ್ ಮಾಡಲು ಹೊರಟಿದ್ದರು. ಅವರನ್ನ ಹೈಜಾಕ್ ಮಾಡೋ ಸಲುವಾಗಿಯೇ ಅಲ್ಲಿಯೇ ಟಿಕಾಣಿ ಹೂಡಿದ್ದಾರೆ. ಇಂಥಹ ಗುಂಡಾಗಿರಿ ರಾಜಕಾರಣ ಮಾಡೋದು ಬಿಜೆಪಿಯ ಸಂಸ್ಕೃತಿ, ನಮ್ಮದಲ್ಲ ಎಂದರು.