ವಿಜಯನಗರ:ಅಭಿವೃದ್ಧಿ ವಿಚಾರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ಆಳಂದ ಶಾಸಕ ಬಿ. ಆರ್. ಪಾಟೀಲ ಮತ್ತು ಕೆಲವರು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ನಾನು ಕೂಡ ಸಹಿ ಹಾಕಿದ್ದೇನೆ, ಅದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಹೊಸಪೇಟೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೊಂದು ಕಮ್ಯುನಿಕೇಷನ್ ಗ್ಯಾಪ್ ವಿಚಾರವಾಗಿ ಈ ರೀತಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದು ನಮಗೆ ಅಸಮಾಧಾನ ಅಂತ ಅನಿಸೋಲ್ಲಾ, ವೈಯುಕ್ತಿಕವಾಗಿ ನಮಗೆ ಯಾವುದೇ ರೀತಿಯಲ್ಲಿ ಅಸಮಾಧಾನವಿಲ್ಲಾ. ಕೆಲವರು, ಹೊಸ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಸಂಪರ್ಕ ಸಂಬಂಧ ಸಭೆ ಕರೆಯಿರಿ ಅಂತ ಹೇಳಿದ್ದಾರೆ, ಸಿಎಂ ಸಭೆ ಕರೆಯೋಕೆ ಒಪ್ಪಿದ್ದಾರೆ. ಸದ್ಯ ಸರ್ಕಾರವೂ ಯಾವುದೇ ರೀತಿಯಲ್ಲಿ ಸಮಸ್ಯೆಯಿಲ್ಲದೇ ನಡೆಯುತ್ತಿದೆ. ಸರ್ಕಾರ ಈಗ ತಾನೇ ರಚನೆಯಾಗಿದೆ, ಸರ್ಕಾರದಿಂದ ಒಳ್ಳೆಯ ಕೆಲಸ ನಡೆಯುತ್ತಿದೆ ಎಂದು ರಾಯರೆಡ್ಡಿ ಹೇಳಿದರು.
ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುತ್ತಿಲ್ಲ ಅಂದರೆ, ಯಾವ ವೈರಿಯೂ ಕೂಡ ಮೆಚ್ಚಲ್ಲಾ. ವೈಯುಕ್ತಿಕ ಆಸೆ ಆಮಿಷಗಳು ಬೇರೆ, ಕೆಲಸದಲ್ಲಿ ಬೆಸ್ಟ್ ಗೌರ್ಮೆಂಟ್ ಇನ್ ದ ಇಂಡಿಯಾ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ಶಾಸಕರ ಒತ್ತಾಯ ಬಹಳ ಇತ್ತು. ನಾನು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದವನಲ್ಲ. ಆಳಂದ ಶಾಸಕರು ಕೇಳಿದ್ದಾರೆ, ಅದಕ್ಕೆ ನಾನು ಸಹಿ ಮಾಡಿದ್ದೇನೆ. ಸರ್ಕಾರ ಶಾಸಕಾಂಗದ ನಡುವೆ ಸೌಹಾರ್ದತೆ ಇರಲಿ ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ನಾನು ಬಹಳ ಸ್ಟ್ರೈಟ್ ಮತ್ತು ಫ್ರಾಂಕ್ ಮ್ಯಾನ್ ಎಂದು ಶಾಸಕ ರಾಯರೆಡ್ಡಿ ತಿಳಿಸಿದರು.