ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್ಎಂಡಿಸಿ ಗಣಿ ಕಂಪನಿ 200 ಹುದ್ದೆಗಳಿಗಾಗಿ ಪರೀಕ್ಷೆ ನಡೆಸಿದೆ. ಒಟ್ಟು 53 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ರು. ಈಗಾಗಲೇ ಪರೀಕ್ಷೆ ಮುಗಿದು, 200 ಅಭ್ಯರ್ಥಿಗಳ ಆಯ್ಕೆ ಸಹ ಮಾಡಲಾಗಿದೆ. ಆದರೆ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಸ್ಥಳೀಯರಿಗೆ ಹೆಚ್ಚು ಆದ್ಯತೆ ನೀಡದೇ ಹೊರ ರಾಜ್ಯದವರೆಗೆ ಮಣೆ ಹಾಕಲಾಗಿದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆಗಿರುವುದನ್ನ ಯಾವುದೇ ಕಾರಣಕ್ಕೂ ರದ್ದು ಪಡಿಸಬಾರದು ಎಂದು ಒತ್ತಾಯಿಸಿದ್ದಾರೆ.