ಬಳ್ಳಾರಿ: ಪಕ್ಷದಲ್ಲಿ ಯಾವುದಾದರೂ ಉತ್ತಮ ಸ್ಥಾನಮಾನವನ್ನು ಪಡಿಯಬೇಕೆಂದರೆ ತಾಳ್ಮೆಯಿಂದ ಕಾಯಬೇಕಾಗುತ್ತೆ. ಮುಂದೊಂದು ದಿನ ಪಕ್ಷ ನಮ್ಮ ಶ್ರದ್ಧೆ ನೋಡಿ ಅವಕಾಶ ಮಾಡಿಕೊಡಬಹುದು ಎಂದು ಡಿಸಿಎಂ ಸ್ಥಾನ ಮಾನದ ಬಗ್ಗೆ ಸಚಿವ ಬಿ.ಶ್ರೀರಾಮುಲು ಈ ರೀತಿ ಪ್ರತಿಕ್ರಿಯಿಸಿದರು.
ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಹವಂಭಾವಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮಗೆ ಡಿಸಿಎಂ ಸ್ಥಾನಮಾನ ಸಿಗಬೇಕೆಂಬುದು ತಮ್ಮ ಅಭಿಮಾನಿಗಳ ಅಪೇಕ್ಷೆ. ಆದರೆ, ಅದನ್ನು ಪಡೆಯಬೇಕಾದ್ರೆ ನಾವು ತಾಳ್ಮೆಯಿಂದ ಕಾಯಬೇಕಾಗುತ್ತೆ. ಆ ಭಗವಂತನ ಆಶೀರ್ವಾದ ನನ್ನ ಮೇಲಿದ್ದರೆ ಮುಂದೊಂದು ದಿನ ಆ ಸ್ಥಾನಮಾನ ದೊರಕಬಹುದು ಎಂದರು.
'ಉಪಚುನಾವಣೆ ಫಲಿತಾಂಶದ ಆಧಾರದ ಮೇಲೆ ನನ್ನ ಸ್ಥಾನಮಾನ ನಿಂತಿದೆ':
ಸಮಾಜ ಕಲ್ಯಾಣ ಖಾತೆಯೊಂದಿಗೆ ಹಿಂದುಳಿದ ವರ್ಗಗಳ ಖಾತೆಯ ಜವಾಬ್ದಾರಿಯನ್ನು ವಹಿಸಬೇಕಿತ್ತು. ಆದರೆ, ಕೇವಲ ಸಮಾಜ ಕಲ್ಯಾಣ ಖಾತೆ ಜವಾಬ್ದಾರಿಯನ್ನು ಮಾತ್ರ ತಮಗೆ ವಹಿಸಿದ್ದು ಏತಕ್ಕೆ? ಎಂದಾಗ ಸಚಿವ ಶ್ರೀರಾಮುಲು, ರಾಜ್ಯದಲ್ಲಿ ಸದ್ಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಅವರೆಡರಲ್ಲೂ ಕೂಡ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಅದರ ಫಲಿತಾಂಶದ ಆಧಾರದ ಮೇಲೆ ನನ್ನ ಸ್ಥಾನಮಾನದ ಬಗ್ಗೆ ನಿರ್ಧಾರವಾಗಲಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಒಂದೇ ಆಗಿರೋದರ ಕುರಿತ ತಾಂತ್ರಿಕವಾಗಿ ತಮ್ಮಗಳ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದೀರಿ. ಅದರಂತೆಯೇ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಒಂದೇ ಆಗಿರೋದರಿಂದ ಅವುಗಳನ್ನ ಬೇರ್ಪಡಿಸೋದು ಅಗತ್ಯವಿರಲಿಲ್ಲ ಅಂತ ನೀವು ಹೇಳುತ್ತಿದ್ದೀರಿ. ಅದನ್ನು ನಾನು ಒಪ್ಪಿಕೊಳ್ಳುವೆ. ಆದ್ರೆ, ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿಕೊಡುವ ಸಲುವಾಗಿಯೇ ನಮ್ಮ ಮುಖ್ಯಮಂತ್ರಿಗಳು ಕೆಲ ಖಾತೆಗಳನ್ನ ಅವರ ಬಳಿಯೇ ಇಟ್ಟುಕೊಂಡಿದ್ದಾರೆ ಎನ್ನುವ ಮೂಲಕ ಖಾತೆ ಬದಲಾವಣೆಯನ್ನು ಸಮರ್ಥಿಸಿಕೊಂಡರು.