ಹೊಸಪೇಟೆ: 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬಳ್ಳಾರಿ ಜಿಲ್ಲಾ ಪ್ರವಾಸದಲ್ಲಿರುವ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಂಪಿಯ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿ ಕಲ್ಲಿನ ರಥವನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿಗಳಿಂದ ಕೃಷ್ಣದೇವರಾಯ ಸಾಮ್ರಾಜ್ಯದ ಆಡಳಿತದ ವಿವರಗಳನ್ನು ಪಡೆದುಕೊಂಡರು. ಈ ವೇಳೆ ಮಾತನಾಡಿದ ಸೋಮಶೇಖರ್, ಆಗಿನ ಕಾಲದ ವಾಸ್ತುಶಿಲ್ಪ ಸೇರಿದಂತೆ ಕಲೆಗಳಿಗೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಸಿಗುತ್ತಿತ್ತು ಎಂಬುದನ್ನು ಇಂಥ ದೇವಾಲಯಗಳನ್ನು ನೋಡಿದರೆ ನಮಗೆ ತಿಳಿಯುತ್ತದೆ. ಇಂಥ ಕಲ್ಲಿನ ರಥಗಳನ್ನು ನಿರ್ಮಿಸುವುದು ಸಾಮಾನ್ಯವಾದ ಕೆಲಸವಲ್ಲ. ಹೀಗೆ ಅಭೂತಪೂರ್ವ ಕಲೆಗಳನ್ನು ಉಳಿಸಿ ನಮಗಾಗಿ ಬಿಟ್ಟು ಹೋದ ನಮ್ಮ ಪೂರ್ವಜರಿಗೆ ನನ್ನದೊಂದು ದೊಡ್ಡ ಸಲಾಂ ಎಂದರು.