ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಡಾಯದ ಮುನ್ಸೂಚನೆ ನೀಡುತ್ತಿದ್ದಂತೆ ಸಚಿವ ಶ್ರೀರಾಮುಲು ಅವರು ಈಗ ಮತ್ತೆ ಸ್ನೇಹದ ಮಂತ್ರ ಜಪಿಸಲು ಮುಂದಾಗಿದ್ದಾರೆ. ಕಂಪ್ಲಿಯಲ್ಲಿ ಇಂದು ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನಾರ್ದನ ರೆಡ್ಡಿ ಅವರ ಮನವೊಲಿಸಿ ಅವರ ಅಸಮಾಧಾನ ಹೋಗಲಾಡಿಸಲು ನಾನು ಸಿದ್ಧನಿದ್ದೇನೆ. ಅವರೊಂದಿಗಿನ ಸ್ನೇಹಕ್ಕೆ ಜೀವ ಕೊಡಲು ತಯಾರಿದ್ದೇನೆ ಎಂದು ಹೇಳಿದರು. ರೆಡ್ಡಿ ಅವರು ನನ್ನ ಆತ್ಮೀಯ ಸ್ನೇಹಿತರು. ಸ್ನೇಹ ಅಂದ್ರೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎನ್ನುವಂತೆ ಎಲ್ಲರೂ ಮಾತನಾಡುತ್ತಾರೆ. ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ ಶ್ರೀರಾಮುಲು. ಸ್ನೇಹ ಮತ್ತು ರಾಜಕಾರಣ ಎರಡೂ ಕೂಡ ಮುಖ್ಯ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಸ್ನೇಹ ಮತ್ತು ಪಾರ್ಟಿ ವಿಚಾರ ಬಂದಾಗ ಎರಡನ್ನೂ ಕೂಡ ಸರಿದೂಗಿಸಿಕೊಂಡು ಹೋಗುವೆ ಎಂದು ಶ್ರೀರಾಮುಲು ಹೇಳಿದರು.