ವಿಜಯನಗರ : ಮಂಗಳೂರು ಕುಕ್ಕರ್ ಬಾಂಬ್ ಸ್ಟೋಟದ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅಂದು ಈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಈಗ ಐಸಿಸ್ಗೆ ಬೆಂಬಲ ನೀಡುತ್ತಾರೋ ಅಥವಾ ರಾಜ್ಯದ ಜನರ ಕ್ಷಮೆ ಕೇಳುತ್ತಾರೋ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಷಿ ಪ್ರಶ್ನಿಸಿದ್ದಾರೆ.
ಹೊಸಪೇಟೆ ನಗರದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಫೋಟ ಅದೊಂದು ಸಾಮಾನ್ಯ ಅಪಘಾತ. ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಈ ರೀತಿ ತಂತ್ರ ಮಾಡುತ್ತಿದೆ ಎಂದು ಶಿವಕುಮಾರ್ ಎರಡು ತಿಂಗಳ ಹಿಂದೆ ಹೇಳಿದ್ದರು. ಐಸಿಸ್ನವರೇ ತಾವು ದಾಳಿ ನಡೆಸಿದಾಗಿ ಒಪ್ಪಿಕೊಂಡಿದ್ದಾರೆ. ಈಗ ಶಿವಕುಮಾರ್ ಅವರೇ ಐಸಿಸ್,ತಾಲಿಬಾನ್ ಅವರನ್ನು ಬೆಂಬಲಿಸುತ್ತೀರಾ ಅಥವಾ ರಾಜ್ಯದ ಜನರ ಕ್ಷಮೆ ಕೇಳ್ತಿರಾ ಎಂದು ಹೇಳಿದರು. ಇಲ್ಲವಾದಲ್ಲಿ ನೀವು ಐಎಸ್‌ಐಎಸ್, ತಾಲಿಬಾನ್ ಜೊತೆಗೆ ಇರುವವರು ಎನ್ನುವುದು ಜನ ತೀರ್ಮಾನ ಮಾಡುತ್ತಾರೆ. ಶಿವಕುಮಾರ್ ನೀವು ಕ್ಷಮೆ ಕೇಳಿದರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇದ್ದೀರಾ. ಇಲ್ಲದಿದ್ದರೆ ಭಯೋತ್ಪಾದಕರ ಪರ ಇದ್ದೀರಿ ಎಂದರ್ಥ ಎಂದು ಹೇಳಿದರು.
ವಿದೇಶಿ ಶಕ್ತಿಗಳಿಂದ ಕುಕ್ಕರ್ ಬಾಂಬ್ ಸ್ಪೋಟ : ಕುಕ್ಕರ್ ಬಾಂಬ್ ಸ್ಟೋಟ ವಿದೇಶಿ ಶಕ್ತಿಗಳಿಂದ ಆಗಿದೆ. ಅದಕ್ಕೆ ಪಾಕಿಸ್ತಾನದ ಬೆಂಬಲ ಇದೆ. ಡಿ.ಕೆ. ಶಿವಕುಮಾರ್ ಅವರು ಇದನ್ನು ಸಾಮಾನ್ಯ ಸ್ಫೋಟ ಎಂಬಂತೆ ಮಾತನಾಡುತ್ತಾರೆ ಎಂದರು.
ಇದು ತುಷ್ಟೀಕರಣದ ರಾಜಕಾರಣ. ಹಲವು ವರ್ಷಗಳಿಂದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ತುಷ್ಟೀಕರಣ ಮಾಡುತ್ತಾ ಬಂದಿವೆ. ಜಗತ್ತಿನಲ್ಲಿ ಪಾಕಿಸ್ತಾನ ಪ್ರಾಯೋಜಿತ ಸ್ಫೋಟ, ಭಯೋತ್ಪಾದನೆ ನಡೆಯುತ್ತಿದೆ. ಪಾಕಿಸ್ತಾನವನ್ನು ಏಕಾಂಗಿ ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕೆನ್ನುವುದು ಭಾರತದ ನಿಲುವುವಾಗಿದೆ. ಆದರೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾರೆ ಎಂದು ಟೀಕಿಸಿದರು.