ಬಳ್ಳಾರಿ:ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗಮಾಡಿರುವುದು ಅತ್ಯಂತ ನೋವು ತಂದಿದೆ. ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತೆ ಒಂದು ಮಾಡೋಕೆ ಒಪ್ಪಿದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಯುವಜನ ಸೇವಾ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ವಿಶ್ವ ಪ್ರಸಿದ್ಧ ಹಂಪಿ, ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳು ನಮ್ಮ ಜಿಲ್ಲೆಯಿಂದ ದೂರವಾಗಿವೆ, ಇದು ನಮಗೆ ಅತ್ಯಂತ ನೋವು ತಂದಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ನಾವೆಲ್ಲರೂ ಅಣ್ಣತಮ್ಮಂದಿರಂತೆ ಇದ್ದೇವೆ. ಮತ್ತೆ ಅಖಂಡ ಬಳ್ಳಾರಿ ಮಾಡಬೇಕೆನ್ನುವ ಆಸೆಯಲ್ಲಿ ತಪ್ಪಿಲ್ಲ. ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಅಖಂಡ ಜಿಲ್ಲೆಯನ್ನು ಒಂದು ಮಾಡುವುದಾಗಿ ಹೇಳಿದ್ದೆವು. ಸ್ಥಳೀಯರ ಗಮನಕ್ಕೆ ತಂದು, ಅವರೆಲ್ಲರೂ ಒಪ್ಪುವುದಾದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚೆರ್ಚಿಸುವೆ ಎಂದರು.
ಬಳ್ಳಾರಿಯಲ್ಲಿ ಇನ್ಮುಂದೆ ರೌಡಿಗಳು ಬಾಲ ಬಿಚ್ಚುವಂತಿಲ್ಲ:ರಾಜ್ಯದ ಜನರು ಜನಪರ, ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ, ಅವರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ಅಭಿವೃದ್ಧಿಯೇ ನಮ್ಮ ಮೊದಲ ಗುರಿ, ಬಡಜನರ ಸೇವೆಯೇ ನಮ್ಮ ಆದ್ಯತೆ, ನಮ್ಮ ಅವಧಿಯಲ್ಲಿ ದೌರ್ಜನ್ಯ, ದಬ್ಬಾಳಿಕೆ, ರೌಡಿಸಂಗೆ ಅವಕಾಶವಿಲ್ಲ. ಒಂದು ವೇಳೆ ಬಾಲ ಬಿಚ್ಚಿದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಬಳ್ಳಾರಿಯ ಜನರು ಉತ್ತಮ ಆಡಳಿತ ನಡೆಸಲು ಆಶೀರ್ವದಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು ಎನ್ನುವ ಆಶಯ ನಮ್ಮದು. ಜಿಲ್ಲೆಯಲ್ಲಿ ದೌರ್ಜನ್ಯ, ರೌಡಿಸಂ, ದಬ್ಬಾಳಿಕೆಗೆ ಅವಕಾಶವೇ ಇಲ್ಲ. ಯಾರೂ ಕೂಡ ಬಾಲ ಬಿಚ್ಚಂಗಿಲ್ಲ. ಇದಕ್ಕಾಗಿಯೇ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವೆ ಎಂದರು.