ಬಳ್ಳಾರಿ:ಒಂದ್ ಕಾಲ ಇತ್ತು. ಬಿಜೆಪಿ ಟಿಕೆಟ್ ಕೊಟ್ರೆ ಜನ ನಾನೋಲ್ಲೇ ನೀನೋಲ್ಲೆ ಅಂತಿದ್ರು. ಈಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೂ ಅಂಥದ್ದೇ ಗತಿ ಬಂದೈತಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಅಂದಿನ ಬಿಜೆಪಿ ಗತಿ ಇಂದು ಕಾಂಗ್ರೆಸ್ ಗೆ ಬಂದೈತಿ: ಸಚಿವ ಈಶ್ವರಪ್ಪ ವ್ಯಂಗ್ಯ ಬಿಜೆಪಿಗೆ ಸೋಲಿನ ಪರ್ವಾರಂಭವಾದಾಗ ಈ ರೀತಿಯ ಸನ್ನಿವೇಶ ನಿರ್ಮಾಣವಾಗಿತ್ತು. ಇದೀಗ ಕಾಂಗ್ರೆಸ್, ಜೆಡಿಎಸ್‌ಗೆ ಸೋಲು ಶುರುವಾಗಿದೆ. ಬಿಜೆಪಿ ನಿರಂತರವಾಗಿ ಗೆಲುವಿನ ಗಾಲಿ ಮೇಲೆನೇ ಸಾಗುತ್ತಿದೆ. ಅಷ್ಟೇ ಅಲ್ಲ, ಇನ್ಮುಂದೆ ಗೆಲುವಿನ ಸರಮಾಲೆಯೇ ನಮಗೆ ಒಲಿಯಲಿದೆ ಎಂದು ಸಚಿವ ಕೆಎಸ್‌ಈ ವಿಶ್ವಾಸ ವ್ಯಕ್ತಪಡಿಸಿದರು.
ಮುನಿರತ್ನಗೆ ಟಿಕೆಟ್ ಖಾತ್ರಿ:
ರಾಜರಾಜೇಶ್ವರಿ ನಗರದ ಉಪಚುನಾವಣೆಯ ಟಿಕೆಟ್ ಮುನಿರತ್ನಗೆ ದೊರೆಯಲಿದೆ ಎಂಬ ಸುಳಿವನ್ನು ಈಶ್ವರಪ್ಪ ಈ ವೇಳೆ ಬಿಟ್ಟುಕೊಟ್ಟರು. ಈ ಮೊದಲು ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲುತ್ತಿದ್ದರು. ಅದಕ್ಕಾಗಿ ಆಗ ಅಭ್ಯರ್ಥಿಗಳ ಹೆಸರನ್ನು ಆದಷ್ಟು ಮೊದಲೇ ಪ್ರಕಟಿಸಲಾಗುತ್ತಿತ್ತು. ಆದರೆ, ಇಂದು ಪಕ್ಷ ಸಾಕಷ್ಟು ಸಂಘಟಿತವಾಗಿದೆ. ಆಕಾಂಕ್ಷಿಗಳು ಹೆಚ್ಚಿರುವುದು ಮತ್ತು ಗೆಲುವು ಖಚಿತವಾಗಿರೋದ್ರಿಂದ ಅಭ್ಯರ್ಥಿಗಳ ಆಯ್ಕೆ ತಡವಾಗಿದೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು.
ಸಿಬಿಐ ದಾಳಿ ಬಗ್ಗೆ ಸಮರ್ಥನೆ:
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿದ್ದನ್ನು ಸಮರ್ಥಿಸಿಕೊಂಡ ಅವರು, ಸಿಬಿಐ ತನ್ನ ಕೆಲಸ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ನಿನ್ನೆ ಎಲ್ಲಾ ಪಕ್ಷದ ಮುಖಂಡರ ಮನೆ ಮೇಲೆ ದಾಳಿ ನಡೆಯಲಿ ಎಂದು ಸವಾಲು ಹಾಕಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ಅವರ ಸರ್ಕಾರ ಇದ್ದಾಗ ಈ ಕೆಲಸ ಯಾಕೆ ಮಾಡಲಿಲ್ಲ? ಎಂದು ಮರು ಪ್ರಶ್ನೆ ಹಾಕಿದರು.
ಈ ಹಿಂದೆ ಸಿಬಿಐ ಬಂಧನದಿಂದ ಜೈಲಿನಿಂದ ಹೊರ ಬಂದ ಡಿಕೆಶಿ ಅವರನ್ನು ಮೆರವಣಿಗೆ ಮೂಲಕ ಕರೆತಂದಿದ್ದ ಸಂಬಂಧ ಪ್ರತಿಕ್ರಿಯಿಸುತ್ತಾ, ಅದೇನು ಘನಂದಾರಿ ಕಾರ್ಯವೇ? ಎಂದರು. ಹಾಗಾದರೆ ಯಡಿಯೂರಪ್ಪ ಅವರನ್ನೂ ಸಹ ಹಾಗೆಯೇ ಕರೆತರಲಾಗಿತ್ತಲ್ಲಾ ಎಂಬ ಪ್ರಶ್ನೆಗೆ, ಅದು ಸಹ ತಪ್ಪೇ. ಯಾರೇ ಆಗಲಿ, ಜೈಲಿನಿಂದ ಬಿಡುಗಡೆ ಯಾದಾಗ ವಿಜೃಂಭಿಸಿ ಕರೆತರುವುದು ಸರಿಯಲ್ಲ ಎಂದರು.
ಕುರುಬರ ಎಸ್ಟಿ ಸ್ಥಾನಮಾನದ ಹೋರಾಟಕ್ಕೆ ಬೆಂಬಲ:
ಕುರುಬ, ಕೋಲಿ ಮೊದಲಾದವರ ಬೇಡಿಕೆ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಸ್ವಾಮೀಜಿಗಳು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಕುರಿತು ಹೋರಾಟ ಮಾಡಲು ಅ. 11 ರಂದು ಕರೆದಿರುವ ಸಭೆಗೆ ನಮ್ಮ ಬೆಂಬಲವೂ ಇದೆ ಎಂದು ಸಚಿವರು ಎಂದರು.
ಹಿಂದುಳಿದ ವರ್ಗದಲ್ಲಿರುವ ಸಮುದಾಯಗಳು ಎಸ್ಟಿಗೆ ಬರುವುದಾದರೆ, ಒಬಿಸಿಯಲ್ಲಿನ ತಮ್ಮ ಮೀಸಲಾತಿ ಪಾಲನ್ನು ತೆಗೆದುಕೊಂಡು ಎಸ್ಟಿಗೆ ಬರಬೇಕು. ಆ ಮೂಲಕ ಎಸ್ಟಿಗಳಿಗೆ ಇದರಿಂದ ಅನ್ಯಾಯವಾಗಬಾರದು ಎಂದು ಹೇಳಿದರು.
ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದು ಬಾಕಿ ಇದೆ. ಅದಕ್ಕೂ ಕುರಬರನ್ನು ಎಸ್ಟಿಗೆ ಸೇರಿಸುವ ಹೋರಾಟಕ್ಕೂ ಸಂಬಂಧವಿಲ್ಲ. ಎಸ್ಟಿಗಳಿಗೆ ಶೇ. 3 ರಿಂದ ಮೀಸಲಾತಿಯನ್ನು ಶೇ 7.5 ಕ್ಕೆ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.
ಉತ್ತರ ಪ್ರದೇಶದ ಮನಿಷ ವಾಲ್ಮೀಕಿ ಹತ್ಯೆ ಪ್ರಕರಣದ ಬಗ್ಗೆ ಪ್ರಧಾನಿಗಳು ಮೌನವಹಿಸಿರುವ ಬಗ್ಗೆ ಪ್ರತಿ ಪಕ್ಷಗಳ ಆರೋಪದ ಬಗ್ಗೆ ಉತ್ತರಿಸುತ್ತಾ, ಎಲ್ಲದ್ದಕ್ಕೂ ಪ್ರಧಾನಿಗಳೇ ಉತ್ತರಿಸಬೇಕಿಲ್ಲ. ಆ ಘಟನೆ ನಡೆದಿದ್ದು ತಪ್ಪು. ಈಗ ಸುಪ್ರೀಂಕೋರ್ಟ್ ಆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದೆ. ತಪ್ಪಿತಸ್ಥರು ಯಾರೆಂದು ವರದಿ ಬಂದ ಮೇಲೆ ಗೊತ್ತಾಗಲಿದೆ. ಅದಕ್ಕೆ ಹೊಣೆ ಯಾರು ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ ಎಂದರು.
ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಷಿ, ಪಕ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸವನಗೌಡ, ಮಾಜಿ ಶಾಸಕ ಟಿ. ಹೆಚ್. ಸುರೇಶ್ ಬಾಬು, ಬುಡಾ ಅಧ್ಯಕ್ಷ ದಮ್ಮೂರು ಶೇಖರ ಹಾಗು ಇನ್ನಿತರರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.