ಬಳ್ಳಾರಿ : ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸಂಡೂರು ಸೇರಿದಂತೆ ವಿವಿಧ ಗಣಿ ಬಾಧಿತ ಹಳ್ಳಿಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜೊತೆಗೆ ಸ್ಥಳೀಯರನ್ನು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಆಶ್ರಯ ಕಾಲೋನಿಯ ಮಾಹಿತಿ ಪಡೆದರು.
ಸಂಡೂರು ಪಟ್ಟಣದ ಕಪ್ಪಲಕುಂಟೆ ರಸ್ತೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣ ಮಾಡುತ್ತಿರುವ ವಸತಿ ಸಮುಚ್ಚಯದ ಕಾಮಗಾರಿಯ ಪ್ರಗತಿಯನ್ನು ಜಮೀರ್ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ತುಕಾರಾಮ್ ಜತೆಗೂಡಿ 135 ಕೋಟಿ ರೂ. ವೆಚ್ಚದಲ್ಲಿ 32 ಎಕರೆ ಪ್ರದೇಶದಲ್ಲಿ 2172 ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಿದರು.
ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ನಿಲ್ಲಬೇಕು :ಬಳಿಕ ಸಂಡೂರಿನ ಚಪ್ಪರದ ಹಳ್ಳಿಯಲ್ಲಿ ಜಾಮಿಯಾ ಮಸೀದಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಾದಿ ಮಹಲ್ ಕಾಮಗಾರಿ ವೀಕ್ಷಿಸಿದರು. ಈ ವೇಳೆ ಸಮುದಾಯದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಮೀರ್, ಮತದಾನ ಮಾಡಲು ಅಲಕ್ಷ್ಯ ಬೇಡ. ನೀವು ಒಂದು ಮತ ಹಾಕದಿದ್ದರೆ ಬಿಜೆಪಿಗೆ ಎರಡು ಮತ ಲಾಭ ಆದಂತೆ. ದೇಶದ ಹಿತಾಸಕ್ತಿಗಾಗಿ ಇಡೀ ಸಮುದಾಯ ಕಾಂಗ್ರೆಸ್ ಬೆಂಬಲಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಶೇ.100 ರಷ್ಟು ಕಾಂಗ್ರೆಸ್ ಪರ ನಿಲ್ಲಬೇಕು. ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಮಾತ್ರ ದೇಶದಲ್ಲಿ ನೆಮ್ಮದಿ ಸಾಧ್ಯ. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದಾಗಲೆಲ್ಲ ಜನಪರ ಅಭಿವೃದ್ಧಿ ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದು ಗ್ಯಾರಂಟಿ ಯೋಜನೆ ಜಾರಿಗೂಳಿಸಿದ್ದು, ಕೋಟ್ಯಂತರ ಕುಟುಂಬಗಳು ನೆರವು ಪಡೆದಿವೆ.
ಜಾಮಿಯಾ ಮಸೀದಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಾದಿ ಮಹಲ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಎರಡು ಹಂತದಲ್ಲಿ ತಲಾ 50 ಲಕ್ಷ ನೆರವು ಬಿಡುಗಡೆ ಮಾಡಲಾಗುವುದು. 11 ಮಸೀದಿಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಅರ್ಥಿಕ ನೆರವು ವಕ್ಫ್ ಬೋರ್ಡ್ ನಿಂದ ನೀಡಲಾಗುವುದು. ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಲಯ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಶಿಕ್ಷಣ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಹಲವಾರು ಯೋಜನೆಗಳಿದ್ದು, ಸಮುದಾಯ ಅದರ ಸದುಪಯೋಗ ಪಡೆಯಬೇಕು ಎಂದು ಸಚಿವರು ಸಲಹೆ ನೀಡಿದರು.