ಬಳ್ಳಾರಿ: ಮೆಣಸಿನಕಾಯಿ ಬೀಜವನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರೋ ಆರೋಪ ಕೇಳಿ ಬಂದ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಡಿಡಿಗಳನ್ನ ಸಭೆಯಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಕಳುಹಿಸಿದಘಟನೆ ನಡೆಯಿತು.
ಜಿಲ್ಲಾ ಪಂಚಾಯತ್ ಕಚೇರಿಯ ನಜೀರ್ಸಾಬ್ ಸಭಾಂಗಣದಲ್ಲಿಂದು ನಡೆದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಅಧಿಕಾರಿಗಳ ಸಭೆಯಲ್ಲಿ ಮೆಣಸಿನಕಾಯಿ ಬೀಜವನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರೋ ಆರೋಪ ಕೇಳಿ ಬಂತು. ಈ ಹಿನ್ನೆಲೆ ಮೆಣಸಿನಕಾಯಿ ಬೀಜವನ್ನ ಯಾರು ಯಾರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ ಅನ್ನೋದನ್ನ ಪತ್ತೆಹಚ್ಚಿ ಎಂದುತೋಟಗಾರಿಕೆ ಇಲಾಖೆ ಡಿಡಿ ಎಸ್.ಪಿ. ಬೋಗಿ ಹಾಗೂ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರನ್ನ ಸಭೆಯಿಂದ ಈಶ್ವರಪ್ಪ ಕಳುಹಿಸಿದರು.
ಅಧಿಕಾರಿಗಳನ್ನು ಸಭೆಯಿಂದ ಕಳುಹಿಸಿದ ಈಶ್ವರಪ್ಪ ಮೆಣಸಿನಕಾಯಿ ಬೀಜ ಕಾಳಸಂತೆಯಲ್ಲಿ ಮಾರಾಟ ಮಾಡೋದಲ್ಲದೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರೋ ಆರೋಪ ಹಿನ್ನೆಲೆ ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ಮಾಡಿದ್ರು. ಈ ಕುರಿತು ಸಭೆಯಲ್ಲಿ ಗರಂ ಆದ ಸಚಿವ ಈಶ್ವರಪ್ಪ, ಅಧಿಕಾರಿಗಳು ಆಡೋ ಆಟದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತೆ ಅಂತಾ ಕಿಡಿಕಾರಿದ್ರು.
ಖಾಸಗಿ ಬೀಜ ಮಾರಾಟ ಕಂಪನಿಗಳ ಜೊತೆಗೆ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಶಾಸಕ ನಾಗೇಂದ್ರ ಕೂಡ ಆರೋಪಿಸಿದ್ದಾರೆ. ಈ ವಿಚಾರವಾಗಿಯೂ ಸೂಕ್ತ ಉತ್ತರ ನೀಡದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್.ಪಿ. ಬೋಗಿ ಅವರನ್ನ ಸಭೆಯಿಂದ ಸಚಿವ ಈಶ್ವರಪ್ಪ ಹೊರ ಕಳಿಸಿದ್ರು. ಅಧಿಕ ಹಣಕ್ಕೆ ಮೆಣಸಿಕಾಯಿ ಬೀಜ ಮಾರಾಟ ಮಾಡುತ್ತಿರೋ ಅಂಗಡಿ ಮಾಲೀಕರ ವಿರುದ್ಧ ಕೇಸ್ ಹಾಕಿ ಬನ್ನಿ ಎಂದು ಸಚಿವ ಈಶ್ವರಪ್ಪ ಸೂಚಿಸಿದ್ದಾರೆ.