ಕರ್ನಾಟಕ

karnataka

ETV Bharat / state

ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕರೂ ನಿಜಾಮರಿಂದ ಮುಕ್ತಿ ಪಡೆಯಲು ಒಂದು ವರ್ಷ ಬೇಕಾಯಿತು: ಸಚಿವ ಬಿ.ಎಸ್.ಆನಂದಸಿಂಗ್

ಬಳ್ಳಾರಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಹೈದರಾಬಾದ್ ನಿಜಾಮ ಮೀರ್ ಉಸ್ಮನ್ ಅಲಿ ಅವರ ಸ್ವತಂತ್ರ ರಾಷ್ಟ್ರದ ಆಲೋಚನೆ, ಖಾಸಿಂ ರಜನಿ ನೇತೃತ್ವದಲ್ಲಿ ನಡೆದ ಹಿಂಸೆ,ಕ್ರೌರ್ಯ ಮತ್ತು ದಬ್ಬಾಳಿಕೆ ಹಾಗೂ ಇದಕ್ಕೆ ಸಿಡಿದೆದ್ದ ಹೈ. ಕ ಭಾಗದ ಜನರು. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ನಡೆದ ಹೋರಾಟ,ಚಳವಳಿಗಳನ್ನು ಹಾಗೂ ನೆನಪುಗಳನ್ನು ಮೆಲುಕು ಹಾಕಲಾಯಿತು.

Minister BS Anandasingh
ಸಚಿವ ಬಿ.ಎಸ್.ಆನಂದಸಿಂಗ್

By

Published : Sep 17, 2020, 6:56 PM IST

ಬಳ್ಳಾರಿ: ದೇಶಕ್ಕೆ 1947 ಆ.15ರಂದು ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಪ್ರದೇಶಗಳು ಸ್ವತಂತ್ರ್ಯವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ತಿಳಿಸಿದರು.

ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳುವಳಿ:ರಾಷ್ಟ್ರಕ್ಕೆ 1947ರ ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಸ್ವಾತಂತ್ರ್ಯ ದೊರೆತಿರಲಿಲ್ಲ. ಸ್ವತಂತ್ರ ರಾಷ್ಟ್ರಕಟ್ಟುವ ಬಯಕೆಯಿಂದ ಹೈದ್ರಾಬಾದ್ ನಿಜಾಮರಾದ ಮೀರ್ ಉಸ್ಮನ್ ಅಲಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಕೊಳ್ಳದೇ ಸ್ವತಂತ್ರವಾಗಿರಲು ಬಯಸಿ ಹೈದ್ರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ಇದರಿಂದಾಗಿ ಭಾರತದೊಡನೆ ವಿಲೀನಗೊಳ್ಳುವ ಉದ್ದೇಶದಿಂದ ಹೈದ್ರಾಬಾದ್ ಸಂಸ್ಥಾನದ ಜನರು ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದರು. ಈ ಚಳುವಳಿಯನ್ನು ಹತ್ತಿಕ್ಕಲು ಹೈದ್ರಾಬಾದ್ ನಿಜಾಮನು ಖಾಸಿಂ ರಜನಿ ಎಂಬುವವನ ನೇತೃತ್ವದಲ್ಲಿ ರಜಾಕಾರ ದಾಳಿ ಆರಂಭಿಸಿದನು ಎಂದು ನೆನೆಸಿಕೊಂಡರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

ಈ ರಜಾಕಾರರು ಈ ಭಾಗದ ಜನರ ಮೇಲೆ ನಿರಂತರವಾಗಿ ಹಿಂಸೆ, ಸುಲಿಗೆ, ಕೊಲೆ ಮತ್ತು ದೌರ್ಜನ್ಯ ಮಾಡುತ್ತಾ ಜನರನ್ನು ಲೂಟಿ ಮಾಡಿದರು. ಇದರ ಪರಿಣಾಮವಾಗಿ ಈ ಭಾಗದ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ದೊರೆತಿರಲಿಲ್ಲ. ಈ ಪ್ರದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಪ್ರಗತಿ ಶೂನ್ಯದ ಕಡೆಗೆ ಹೆಜ್ಜೆ ಇಡುವಂತಾಯಿತು ಎಂದರು.

ಚಳುವಳಿಯಲ್ಲಿ ಕಾಲೇಜು ವಿದ್ಯಾರ್ಥಿಗಳು: ಸ್ವಾಮಿ ರಮಾನಂದ ತೀರ್ಥರು, ಡಾ. ಮೇಲುಕೋಟೆಯವರು, ಕಲುಬುರಗಿಯ ಅನಿರುದ್ಧ ದೇಸಾಯಿ, ಯಾದಗಿರಿಯ ಕೋಲೂರು ಮಲ್ಲಪ್ಪ ಹಾಗೂ ಚಿತ್ತಾಪುರದ ಬಸಪ್ಪ ಸಜ್ಜನ್ ಶೆಟ್ಟರ್, ಕಾರಟಗೀಯ ಬೆಣಕಲ್ ಭೀಮಸೇನರಾಯ್, ಆಳಂದದ ಎ.ಬಿ.ಪಾಟೀಲ್, ಕನಕಗಿರಿಯ ಜಯತೀರ್ಥ ರಾಜ ಪುರೋಹಿತ್ ಮುಂತಾದವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನೆಗೆ ಹೋರಾಟಗಳು ಪ್ರಾರಂಭಗೊಂಡವು. ಸ್ವಾಮಿ ರಮಾನಂದ ತೀರ್ಥರು ಕಾಲೇಜು ವಿದ್ಯಾರ್ಥಿಗಳಿಗೆ ನೀಡಿದ “ಕ್ವಿಟ್ ಕಾಲೇಜು ನವ್” ಕರೆಗೆ ಸಾವಿರಾರು ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬಲತುಂಬಿದರು ಎಂದು ನೆನೆಸಿಕೊಂಡರು.

ಇದಲ್ಲದೇ, ಗ್ರಾಮೀಣ ಪ್ರದೇಶದಲ್ಲಿ ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ್, ಶಿವಮೂರ್ತಿ ಸ್ವಾಮಿ ಅಳವಂಡಿ, ಡಾ. ಚುರ್ಚಿಹಾಳ್ಮಠ, ಭೀಮಜ್ಜ, ಕೊರ್ಲಹಳ್ಳಿ ಶ್ರೀನಿವಾಸಾಚಾರಿ, ಕಾಟಾಪುರದ ಹನುಮಂತರಾವ್, ಕಿಸನ್ ರಾವ್ ದೇಸಾಯಿ, ಶೇಷಪ್ಪ ಪತ್ತಾರ್, ಕುರುಬರ ಯಲ್ಲಪ್ಪ, ಹರಿಜನ ಹಳ್ಳೆಪ್ಪ, ನಾಗೋಜಿ ಔದೋಜಿ ಮುಂತಾದವರು ಕಲ್ಯಾಣ ಕರ್ನಾಟಕ ವಿಮೋಚನೆಗೆ ತಮ್ಮ ಪ್ರಾಣವನ್ನು ಲಕ್ಕಿಸದೇ ಹೋರಾಡಿದರು. ಅಲ್ಲದೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ, ಹಟಿ ಗುರುಬಸವ್ವ, ಸೀತಮ್ಮ ಬಡಿಗೇರ ಮುಂತಾದ ಮಹಿಳಾ ಮುಖಂಡರು ‘ತ್ರಿವರ್ಣ ಧ್ವಜ’ ಹಿಡಿದು ‘ವಂದೇ ಮಾತರಂ’ ಘೋಷಣೆ ಕೂಗುತ್ತಾ ಜನರಲ್ಲಿ ಧೈರ್ಯ ತುಂಬಿದರು.

ವಿಧ್ಯಾರ್ಥಿ ಮುಖಂಡರುಗಳಾದ ಮಠಮಾರಿ ನಾಗಪ್ಪ, ಚಂದ್ರಯ್ಯ, ಶರಬಯ್ಯ, ಬಸವಣ್ಣ ಮುಂತಾದವರು ಕಲ್ಯಾಣ ಕರ್ನಾಟಕ ವಿಮೋಚನೆಗೆ ಹೋರಾಡಿದರು. ಅಲ್ಲದೇ ಕಲಬುರಗಿ ಆರ್ಯ ಸಮಾಜ ಚಳುವಳಿ ಹಾಗೂ ಮತ್ತಿತರ ಸಂಘ ಸಂಸ್ಥೆಗಳು ಹೋರಾಟಕ್ಕೆ ಇಳಿದು ರಜಾಕಾರ ದಬ್ಬಾಳಿಕೆಯನ್ನು ದಿಕ್ಕರಿಸಿ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾದರು ಎಂಬುದನ್ನು ಅವರು ಸ್ಮರಿಸಿಕೊಂಡರು.

ಕೃಷಿ ಕಾಲೇಜು ಮೇಲ್ದರ್ಜೆಗೆ ಶೀಘ್ರ ಕ್ರಮ: ಜಿಲ್ಲೆಯಲ್ಲಿರುವ ಹಗರಿ ಕೃಷಿ ಕಾಲೇಜನ್ನು ಮೇಲ್ದರ್ಜೇಗೇರಿಸುವ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಮತ್ತು ಪ್ರತಿ 3 ತಿಂಗಳಿಗೊಮ್ಮೆ ಕೆಕೆಆರ್​ಡಿಬಿ ಅನುದಾನ ಹಂಚಿಕೆ, ಪ್ರಗತಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ABOUT THE AUTHOR

...view details