ಕರ್ನಾಟಕ

karnataka

ETV Bharat / state

'ಯಾರೋ ಕಟ್ಟಿದ ಗೂಡಿನಲ್ಲಿ ಹೋಗಿ ರಾಜಕಾರಣ ಮಾಡುವ ಸ್ಥಿತಿ ನನ್ನದಲ್ಲ' - Wims Hospital incident

ಬಳ್ಳಾರಿಯ ವಿಜಯ ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಯಲ್ಲಿ ವಿದ್ಯುತ್ ವ್ಯತ್ಯಯದಿಂದ ವೆಂಟಲೇಟರ್​​ಗಳು ಸ್ಥಗಿತಗೊಂಡ ರೋಗಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಬಿ.ಶ್ರೀರಾಮುಲು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Minister B Sriramulu visits Wims Hospital
ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಶ್ರೀರಾಮುಲು

By

Published : Sep 18, 2022, 11:04 AM IST

ಬಳ್ಳಾರಿ: ಸಿದ್ದರಾಮಯ್ಯನಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಷೆ ಹೋಗುವ ಸ್ಥಿತಿ ನನಗೆ ಬಂದಿಲ್ಲ. ಯಾರೋ ಕಟ್ಟಿದ ಗೂಡಿನಲ್ಲಿ ಹೋಗಿ ರಾಜಕಾರಣ ಮಾಡುವ ಸ್ಥಿತಿಯೂ ನನ್ನದಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ವಿಮ್ಸ್​​ನಲ್ಲಿ ವಿದ್ಯುತ್ ಸಮಸ್ಯೆಯಿಂದ ಕೆಲ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ಸುಳ್ಳು ಹೇಳಿ ರಾಜಕೀಯ ಮಾಡಿಕೊಂಡು ಬಂದಿಲ್ಲ. ನಾನು ಸುಳ್ಳು ಹೇಳಿ ರಾಜಕೀಯ ಮಾಡಿದ್ರೆ ದೊಡ್ಡ ವ್ಯಕ್ತಿಯಾಗುತ್ತಿದೆ. ಸಿದ್ದಾಂತದ ಮೇಲೆ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಒಂದು ವೇಳೆ ಅಂತಹ ಸ್ಥಿತಿ ಬಂದರೆ ನಾನು ರಾಜಕಾರಣವನ್ನು ಬಿಡುತ್ತೇನೆ" ಎಂದರು.

ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಶ್ರೀರಾಮುಲು

"ವಿಮ್ಸ್ ಆಸ್ಪತ್ರೆ ದುರಂತ ವಿದ್ಯುತ್ ಸ್ಥಗಿತದಿಂದಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವೈದ್ಯಾಧಿಕಾರಿಗಳ ಸಭೆ ಕರೆದು ಮಾತನಾಡಿದ್ದೇನೆ. ವಿದ್ಯುತ್ ವ್ಯತ್ಯಯದಿಂದ ಯಾರೂ ಕೂಡ ಸಾವನ್ನಪ್ಪಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಿದೆ. ಡಾ.ಸ್ಮಿತಾ ನೇತೃತ್ವದ ತಂಡ ವರದಿ ಕೊಡಬೇಕಾಗಿದೆ. ತನಿಖಾ ಸಮಿತಿ ವರದಿ ನೀಡಿದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು. ಒಂದು ವೇಳೆ ವಿಮ್ಸ್​​ ಆಡಳಿತದಿಂದ ತಪ್ಪಾಗಿದ್ದರೆ ಅವರ ಮೇಲೆ ಎಫ್​​ಐಆರ್ ದಾಖಲು ಮಾಡಲಾಗುವುದು" ಎಂದರು.

"ವಿಮ್ಸ್‌ನಲ್ಲಿ ವಿದ್ಯುತ್ ಕೊರತೆಯಿಂದ ರೋಗಿಗಳು ಸತ್ತಿಲ್ಲ ಎನ್ನುವುದಾದರೆ ಮೃತರ ಕುಟುಂಬಕ್ಕೆ ಪರಿಹಾರ ಏಕೆ ಘೋಷಣೆ ಮಾಡಿದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾವು ಮಾನವೀಯತೆ ದೃಷ್ಟಿಯಿಂದ ಮೃತಪಟ್ಟವರಿಗೆ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ, ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದೇನೆ. ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬೇಡ. ತಪ್ಪು ಮಾಡದಿದ್ದರೆ ಪರಿಹಾರ ಯಾಕೆ ಘೋಷಣೆ ಮಾಡಿದ್ದಾರೆ ಅಂತಾ? ಪ್ರಶ್ನೆ ಮಾಡುವುದು ಅವರೇ, ಪರಿಹಾರ ನೀಡಬೇಕು ಅಂತಾ ಹೇಳುವುದೂ ಅವರೇ. ಮಗು ಚಿವುಟುತ್ತಾ ತೊಟ್ಟಿಲು ತೂಗುತ್ತಾರೆ" ಎಂದು ಶ್ರೀರಾಮುಲು ಟೀಕಿಸಿದರು.

ಇದನ್ನೂ ಓದಿ:ಬಳ್ಳಾರಿ ವಿಮ್ಸ್​ನಲ್ಲಿ ಆರಕ್ಕೇರಿದ ಸಾವಿನ ಪ್ರಕರಣ.. ಮೃತಪಟ್ಟವರ ವಿಡಿಯೋ ವೈರಲ್.. ತನಿಖಾ ತಂಡದ ಭೇಟಿ

ABOUT THE AUTHOR

...view details