ಹೊಸಪೇಟೆ (ಬಳ್ಳಾರಿ): ಹಂಪಿಯ ತುಂಗಭದ್ರಾ ನದಿಯ ದಡದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ತುಂಗಾರತಿಯ ಕಾರ್ಯಕ್ರಮ ನೆರವೇರಿಸಿದರು.
ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ತುಂಗಭದ್ರಾ ನದಿಯ ತಟದವರೆಗೆ ಭುವನೇಶ್ವರಿ ದೇವಿಯ ಮೂರ್ತಿಯನ್ನು ಶೋಭಾಯಾತ್ರೆ ಮೂಲಕ ತರಲಾಯಿತು. ಬಳಿಕ ನದಿ ತಟದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ವಿದ್ಯಾರಣ್ಯ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನದ ಅರ್ಚಕರು ದೇವಿ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.
ತುಂಗಭದ್ರಾ ನದಿಯ ದಡದಲ್ಲಿ ತುಂಗಾರತಿ ಅನೇಕ ಆರತಿಗಳನ್ನು ಮಾಡಲಾಯಿತು. ಒಂಬತ್ತು ಬಾಗಿನಗಳನ್ನು ಗಂಗಾ ಮಾತೆಗೆ ಅರ್ಪಿಸಲಾಯಿತು. ನದಿಯಲ್ಲಿನ ಕಲ್ಲುಗಳಲ್ಲಿ ದೀಪಗಳನ್ನು ಬೆಳಗಿಸಲಾಗಿಯಿತು. ಅಲ್ಲದೇ ಮುನ್ನೆಚ್ಚರಿಕೆಯಾಗಿ ನುರಿತ ಈಜುಗಾರರನ್ನು ನದಿ ಭಾಗದಲ್ಲಿ ನಿಯೋಜಿಸಲಾಗಿತ್ತು.
ಇದೇ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಹಂಪಿ ನದಿಯ ತಟದಲ್ಲಿ ಪ್ರತಿ ಹುಣ್ಣಿಮೆ ದಿನದಂದು ತುಂಗಭದ್ರಾ ಆರತಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ತುಂಗಭದ್ರಾ ಆರತಿಯನ್ನು ನೋಡಿ ಭಕ್ತರು ಹಾಗೂ ಪ್ರವಾಸಿಗರು ಆನಂದಪಡಲಿ ಎಂದರು.