ಹೊಸಪೇಟೆ(ವಿಜಯನಗರ): ಖಾತೆ ಸ್ವೀಕರಿಸಲು ಮುಹೂರ್ತ ನೋಡುವೆ. ಎಲ್ಲರೂ ಮುಹೂರ್ತ ನೋಡಿಕೊಂಡೇ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಎರಡು ಮೂರು ದಿನದಲ್ಲಿ ಒಳ್ಳೆಯ ಮುಹೂರ್ತ ಸಿಗಲಿದೆ. ಆಗ ಖಾತೆ ಸ್ವೀಕರಿಸುವ ಕುರಿತು ಆಲೋಚನೆ ಮಾಡಲಾಗುವುದು. ದೇವರ ಮುಹೂರ್ತ ಹಾಗೂ ನನ್ನ ನಕ್ಷತ್ರಕ್ಕೆ ಸರಿಹೋಗಬೇಕು ಎಂದು ಸಚಿವ ಆನಂದ ಸಿಂಗ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಿಂದಲೂ ಅಭಿವೃದ್ಧಿ ಕುಂಠಿತವಾಗಲು ಸಾಧ್ಯವಿಲ್ಲ. ಯಾವ ಸಮಯದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ಆಗಬೇಕು ಅವುಗಳು ಆಗುತ್ತವೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಗಾಗಿ 100 ಕೋಟಿ ರೂ:ವಿಜಯನಗರ ಜಿಲ್ಲೆಯ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕಾಗಿ 100 ಕೋಟಿ ರೂ. ಅನುದಾನ ನೀಡಬೇಕೆಂದು ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೇ, ಹಳೆಯ ಕಟ್ಟಡಗಳನ್ನು ಜಿಲ್ಲೆಯ ಕಚೇರಿಗಳಿಗೆ ಬಳಸಿಕೊಳ್ಳಲಾಗುವುದು. ಆರ್ಥಿಕ ಇಲಾಖೆಯಿಂದ ಈಗಾಗಲೇ 50 ಕೋಟಿ ರೂ. ಬಿಡುಗಡೆ ಮಾಡುವ ಆಶ್ವಾಸನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಭೆ ಬಳಿಕ ಜಿಲ್ಲೆಗೆ ಅಧಿಕಾರಿಗಳ ಆಗಮನ: ಮುಖ್ಯಮಂತ್ರಿ ನೇತೃತ್ವದಲ್ಲಿ ಇಲಾಖೆವಾರು ಒಂದು ಸಭೆ ನಡೆಸಬೇಕಾಗಿದೆ. ಆ ಬಳಿಕ ಆರ್ಥಿಕ ಇಲಾಖೆಗೆ ಆದೇಶವನ್ನು ಹೊರಡಿಸಿದರೆ ವಿಜಯನಗರ ಜಿಲ್ಲೆಗೆ ಅಧಿಕಾರಿಗಳು ಬರಲಿದ್ದಾರೆ. ವಿಜಯನಗರ ಜಿಲ್ಲೆಗೆ ಕೆಲಸ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಟಿಎಸ್ಪಿ ಸ್ಥಳದಲ್ಲಿ 150 ಬೆಡ್ ಆಸ್ಪತ್ರೆ ನಿರ್ಮಾಣ: ತುಂಗಭದ್ರಾ ಸ್ಟೀಲ್ ಪ್ರೊಡಕ್ಟ್(ಟಿಎಸ್ಪಿ) ಸ್ಥಳದಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಮಾಡಲಾಗುವುದು. ಜತೆಗೆ 150 ಬೆಡ್ ವ್ಯವಸ್ಥೆವುಳ್ಳ ಆಸ್ಪತ್ರೆ ಸಹ ನಿರ್ಮಾಣವಾಗಲಿದೆ. ಇದರಿಂದ ಮೆಡಿಕಲ್ ಕಾಲೇಜು ಪ್ರಸ್ತಾವನೆ ಸಲ್ಲಿಸಲು ಸಹಾಯವಾಗುತ್ತದೆ. 30 ಎಕರೆ ಸ್ಥಳವನ್ನು ಉಪಯೋಗಿಸಿಕೊಂಡು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.