ಬಳ್ಳಾರಿ :ಕೋವಿಡ್-19 ಸಂದರ್ಭದಲ್ಲಿ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರನ್ನ ವಜಾಗೊಳಿಸುತ್ತಿರುವ ಕುರಿತು ಕೂಲಂಕಷ ಪರಿಶೀಲನೆ ನಡೆಸಿ ಸೂಕ್ತಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವೇಳೆಯಲ್ಲಿ ಏಕಾಏಕಿ ಜಿಂದಾಲ್ ಸಮೂಹ ಸಂಸ್ಥೆಯು ತನ್ನ ನೌಕರರನ್ನ ಕೆಲಸದಿಂದ ತೆಗೆದು ಹಾಕೋದು ತರವಲ್ಲ. ಹೀಗಾಗಿ, ನಾನೇ ಸುಮೋಟೊ ಆಗಿ ಫೀಲ್ಡ್ಗೆ ಇಳಿಯಬೇಕೆಂದು ನಿರ್ಧರಿಸಿರುವೆ. ಯಾರೋ ಒಬ್ಬ ನೌಕರ, ಸೇವ್ ಮೈಲೈಫ್ ಅಂತಾ ಹೇಳಿ ಮತ್ತಿನ್ನೇನೋ ಘೋಷವಾಕ್ಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರೋದು ನನ್ನ ಗಮನಕ್ಕೆ ಬಂದಿದೆ.
ಮುಂದಿನ ವಾರದಲ್ಲಿ ಜಿಲ್ಲಾ ಖನಿಜ ನಿಧಿಯ ಸಭೆ ಕರೆಯುವೆ. ಆ ಸಭೆಗೆ ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥರನ್ನೂ ಆಹ್ವಾನಿಸುವೆ. ಏಕೆ ಈ ಕೋವಿಡ್ ಸಂದರ್ಭದಲ್ಲಿ ನೌಕರರನ್ನ ಕೆಲಸದಿಂದ ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದೀರಿ ಅಂತಾ ನಾನೂ ಕೂಡ ಪ್ರಶ್ನಿಸುವೆ. ನೌಕರರನ್ನ ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ಏನಾದ್ರೂ ತಪ್ಪು ಕಂಡು ಬಂದರೆ ಕೂಡಲೇ ಜಿಂದಾಲ್ ಸಮೂಹ ಸಂಸ್ಥೆಯ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದ್ದಾರೆ.
ಐಎಸ್ಆರ್ ಸಕ್ಕರೆ ಫ್ಯಾಕ್ಟರಿ ಮಾರಾಟ :ಐಎಸ್ಆರ್ ಸಕ್ಕರೆ ಫ್ಯಾಕ್ಟರಿ ಆಸ್ತಿ ಮಾರಾಟ ಮಾಡೋಕೆ ಹುನ್ನಾರ ನಡೆಸಿದ್ದಾರೆ ಎಂಬ ಶಾಸಕ ಜೆ ಎನ್ ಗಣೇಶ್ ಮಾಡಿರುವ ದೂರು ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಗಣೇಶ್ ತಿಳಿದುಕೊಂಡು ಮಾತನಾಡಬೇಕು. ಐಎಸ್ಆರ್ ಸಕ್ಕರೆ ಫ್ಯಾಕ್ಟರಿಯ ಆಸ್ತಿಯು ಸಹಕಾರ ಸಂಘಗಳ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತೆ. ಹೀಗಾಗಿ, ಸಕ್ಕರೆ ಕಾರ್ಖಾನೆಯ ಆಸ್ತಿ ಮಾರಾಟ ಮಾಡಲಿಕ್ಕೆ ಬರಲ್ಲ. ಶಾಸಕರು ತಿಳಿದು ಮಾತನಾಡಬೇಕೆಂದರು.
ಸೋಂಕಿತರ ಸಂಖ್ಯೆ ಕಡಿಮೆ :ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತೆ. ಬಳ್ಳಾರಿ, ಸಂಡೂರು ಹಾಗೂ ಹೊಸಪೇಟೆ ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದವು. ಆದರೀಗ, ಸೋಂಕಿತರ ಸಂಖ್ಯೆಯು ಕಡಿಮೆಯಾಗಿ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ನನಗೆ ವೈಯಕ್ತಿಕವಾಗಿ ಖುಷಿ ತಂದಿದೆ. ಆದರೆ, ಕೋವಿಡ್ ಸೋಂಕಿನ ಹೆಸರಿನಡಿ ಕೆಲ ಅಧಿಕಾರಿಗಳು ಕಚೇರಿಯ ಕೆಲಸಗಳನ್ನ ಅರ್ಧಕ್ಕೆ ನಿಲ್ಲಿಸುವುದು, ತಿರಸ್ಕರಿಸುವುದು, ತಾತ್ಸಾರ ಮನೋಭಾವದಿಂದ ನೋಡೋದು ಹೆಚ್ಚಾಗಿ ಕಂಡು ಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಈಗಾಗಲೇ ಜಿಲ್ಲಾಧಿಕಾರಿ ನಕುಲ್, ಸಿಇಒ ನಂದಿನಿ, ಎಸ್ಪಿ ಸೈದುಲ್ಲಾ ಅಡಾವತ್ ಹಾಗೂ ಡಿಹೆಚ್ಒ ಡಾ.ಹೆಚ್ ಎಲ್ ಜನಾರ್ಧನ್ ಅವರಿಗೆ ಕೋವಿಡ್ ಹೆಸರಿನಲ್ಲಿ ಕಚೇರಿಯ ಕೆಲಸಗಳಿಂದ ನುಣುಚಿಕೊಳ್ಳುವ ಮೇಲಾಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.