ಹೊಸಪೇಟೆ:ನಾನು ಈ ರಾಜ್ಯದ ಅತಿದೊಡ್ಡ ರಾಜಕಾರಣಿ ಅಲ್ಲ. ನನ್ನ ಶ್ರದ್ಧೆ, ಪ್ರಾಮಾಣಿಕತೆ, ಕ್ಷೇತ್ರದ ಜನರ ಆಶೀರ್ವಾದ, ನಿಷ್ಠೆಯಿಂದ ನಾನು ಆಯ್ಕೆಯಾಗಿದ್ದೇನೆ. ನಾನು ಕೇವಲ ಹೊಸಪೇಟೆ ಕ್ಷೇತ್ರದ ಶಾಸಕ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
'ಬ್ಲ್ಯಾಕ್ಮೇಲ್ ಮಾಡುವ ವ್ಯಕ್ತಿಯಲ್ಲ'
ನಾನು ನಿಮ್ಮ ನಿರೀಕ್ಷೆಯ ಪ್ರಕಾರ ಪ್ರತಿಕ್ರಿಯೆ ಕೊಡಲ್ಲ. ಅಸಮಾಧಾನ ಆಗಿರುವ ಬಗ್ಗೆ 7ನೇ ತಾರೀಖಿನಂದು ಬಳ್ಳಾರಿಯಲ್ಲಿ ಹೇಳಿದ್ದೆ. ಅದನ್ನು ಮತ್ತೆ ನೇರವಾಗಿ ಹೇಳುತ್ತೇನೆ. ಬ್ಲ್ಯಾಕ್ಮೇಲ್ ಮಾಡುವ ವ್ಯಕ್ತಿಯಲ್ಲ. ನಮ್ಮ ಪಕ್ಷ, ನಾಯಕರಿಗೆ ಮುಜುಗರ ಆಗುವ ರೀತಿ ನಡೆದುಕೊಳ್ಳುವವನೂ ಅಲ್ಲ.
'ಆತ್ಮೀಯ ರಾಜಕೀಯ ಸ್ನೇಹಿತರಿದ್ದಾರೆ ಎಂಬ ತಪ್ಪು ಕಲ್ಪನೆಯಲ್ಲಿದ್ದೆ'
ನಾನು ಶಿಸ್ತಿನ ಸಿಪಾಯಿ ಅಂತ ಎಲ್ಲರೂ ಹೇಳುತ್ತಾರೆ. ನನ್ನ ಕ್ಷೇತ್ರದ ಜನರಿಗೆ ನನ್ನ ಬಗ್ಗೆ ಗೊತ್ತಿದೆ. ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಜನರನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ನನ್ನ ರಾಜಕೀಯ ಪ್ರಯಾಣ ತುಂಬಾ ಚಿಕ್ಕದ್ದು. ರಾಜಕೀಯ ಪ್ರಯಾಣ 15 ವರ್ಷದ್ದು, ಸಮಾಜಸೇವೆ ಮಾಡಲು ಆರಂಭಿಸಿ 5 ವರ್ಷ ಸಂದಿವೆ. ಆದರೆ ಈ 15 ವರ್ಷದ ರಾಜಕೀಯ ಜೀವನದಲ್ಲಿ ನನ್ನನ್ನು ರಕ್ಷಣೆ ಮಾಡುವ ಬಹಳಷ್ಟು ಆತ್ಮೀಯ ರಾಜಕೀಯ ಸ್ನೇಹಿತರಿದ್ದಾರೆ ಎಂಬ ತಪ್ಪು ಕಲ್ಪನೆಯಲ್ಲಿದ್ದೆ ಎಂದು ನಿನ್ನೆ ಗೊತ್ತಾಯಿತು ಎಂದರು.
'ಹಣ ಕೊಳ್ಳೆ ಹೊಡೆಯಲು ರಾಜಕೀಯಕ್ಕೆ ಬಂದವನಲ್ಲ'
ನಾನು ಯಾವುದೇ ಒಂದು ಇಚ್ಛೆ ಇಟ್ಟುಕೊಂಡು, ಹಣ ಕೊಳ್ಳೆ ಹೊಡೆಯುವ ಉದ್ದೇಶಕ್ಕೆ ರಾಜಕೀಯಕ್ಕೆ ಬಂದವನಲ್ಲ. ನಾನು ಈ ಬಗ್ಗೆ ಈ ಗೋಪಾಲಸ್ವಾಮಿ ದೇಗುಲದಲ್ಲಿ ನಿಂತು ಹೇಳುತ್ತೇನೆ ಎಂದು ಹೇಳಿದರು.