ವಿಜಯನಗರ:ಕಣ್ತುಂಬ ಕನಸು, ಜೀವನದ ಬಗ್ಗೆ ನೂರೆಂಟು ಆಸೆ. ಬದುಕಿ ಬಾಳಬೇಕಿದ್ದ ಜೀವ, ಕುಟುಂಬಕ್ಕೆ ಆಸರೆಯಾಗಬೇಕಿದ್ದವ ನಿನ್ನೆ ಉಸಿರು ನಿಲ್ಲಿಸಿದ್ದಾನೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ(ಮಂಗಳವಾರ) ರಾತ್ರಿ ಈ ಘಟನೆ ನಡೆದಿದೆ.
ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ತಾಂಡದ ಯುವಕ ಸುನೀಲ್ ನಾಯ್ಕ್ (24) ಮೃತ ಯುವಕ. ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ನಮ್ಮ ಮಗನನ್ನು ಕಳೆದುಕೊಂಡಿದ್ದೇವೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ:ಸುನೀಲ್ ನಾಯ್ಕ್ ಹೊಟ್ಟೆ ನೋವು ಎಂದು ಸೋಮವಾರ ಬಂದು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದ. ಮತ್ತೆ ನಿನ್ನೆ(ಮಂಗಳವಾರ) ಮರಳಿ ತೋರಿಸಲು ಬಂದಿದ್ದಾರೆ. ಆಗ ವೈದ್ಯರು ಪ್ಯಾಂಕ್ರಿಯಾಟೈಟಿಸ್ ಆಗಿದೆ, ಆಪರೇಷನ್ ಮಾಡಬೇಕು ಎಂದು ಹೇಳಿ ಬೆಳಗ್ಗೆ 10 ಗಂಟೆಗೆ ಕರೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನ 2 ಗಂಟೆಯಾದರೂ ಏನೂ ಮಾಹಿತಿ ನೀಡಿಲ್ಲ. ಬಳಿಕ 4 ಗಂಟೆಗೆ ಸಾವನ್ನಪ್ಪಿದ್ದಾನೆ ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.
ಆಪರೇಷನ್ ಮಾಡಲು 4 ತಾಸು ಬೇಕಾ?. ನಮ್ಮ ಹುಡುಗ ಸಾಯಲು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಸೇರಿ ಗ್ರಾಮಸ್ಥರು ಆಸ್ಪತ್ರೆ ಹೊರಗೆ ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ನಡೆಸಿದರು. ಆಸ್ಪತ್ರೆಗೆ ನುಗ್ಗಲು ಯತ್ನಿಸಿದ ಜನರನ್ನು ಪೊಲೀಸರು ಹೊರ ಹಾಕಿದರು. ಬಳಿಕ ಪೊಲೀಸರು ಜನರ ಮನವೊಲಿಸಲು ಯತ್ನಿಸಿದ್ದಾರೆ. ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.