ಬಳ್ಳಾರಿ: ಆಂಧ್ರಪ್ರದೇಶ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ನಗರದಲ್ಲಿಂದು ಪ್ರತಿಭಟನೆ ನಡೆಸಿಯಿತು. ನಗರದ ದುರ್ಗಮ್ಮ ದೇವಾಲಯದಿಂದ ಡಿಸಿ ಕಚೇರಿವರೆಗೆ ನಡೆದ ಬೃಹತ್ ಮೆರವಣಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಚಂದ್ರಬಾಬು ನಾಯ್ಡುಗೆ ಬೆಂಬಲ ಸೂಚಿಸಿದರು. ಆಂಧ್ರಪ್ರದೇಶದ ಆಡಳಿತರೂಢ ವೈಎಸ್ಆರ್ಪಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು, ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಿಬಿಎನ್ ಸಂಘದ ಸದಸ್ಯ ಕುಡತಿನಿ ರಾಮು ಮಾತನಾಡಿ, ದೂರದೃಷ್ಟಿವುಳ್ಳ ನಾಯಕ, ಅಭಿವೃದ್ಧಿಯ ಸ್ಪಷ್ಟ ಕಲ್ಪನೆ ಹೊಂದಿರುವ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ಖಂಡನೀಯ. ಅವರ ಮೇಲೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ದ್ವೇಷದ ರಾಜಕಾರಣದಿಂದ ಬಂಧಿಸಿದ್ದಾರೆ. ಇಡಿ, ಸಿಬಿಐ ಮುಂತಾದ ಕೇಸ್ಗಳನ್ನು ಹೊಂದಿರುವ ಸಿಎಂ ಜಗನ್ ಅವರು ಮುಂದಿನ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕೇಸ್ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ತಿಳಿಸಿದರು.
ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಿ.ಶ್ರೀನಿವಾಸ್ ರಾವ್ ಮಾತನಾಡಿ, ಗುಜರಾತ್ ಮಾದರಿಯಿಂದಾಗಿ ಮೋದಿ ಪ್ರಧಾನಿ ಆಗಿದ್ದಾರೆ. ಅದೇ ರೀತಿ ಕನಸು ಕಂಡಿದ್ದ ಚಂದ್ರಬಾಬು ನಾಯ್ಡು ಅವರ ವಿರುದ್ಧ ಇಲ್ಲಸಲ್ಲದ ಕೇಸ್ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ನಾಯ್ಡು ಅವರು ಹೈದರಾಬಾದ್ ಅನ್ನು ಐಟಿಬಿಟಿ ಹಬ್ ಆಗಿ ನಿರ್ಮಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಅನೇಕ ಯುವ ಜನರಿಗೆ ಉದ್ಯೋಗ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಅಂತಹ ನಾಯಕನನ್ನು ಬಂಧಿಸಿರುವುದು ಖಂಡನೀಯ ಎಂದರು.