ಬಳ್ಳಾರಿ: ಈ ಹಿಂದೆ ನಾನು ಬಳ್ಳಾರಿಯಲ್ಲಿ ಅಧಿಕಾರದಲ್ಲಿದ್ದಾಗ, ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ. ಆದರೆ, ನನ್ನೊಂದಿಗಿದ್ದು ನನ್ನ ಬಿಟ್ಟು ಹೋದವರಿಗೆ ಈ ಚುನಾವಣೆಯಲ್ಲಿ ಜನರು ಪಾಠ ಕಲಿಸಿದ್ದಾರೆ ಎಂದು ಕೆಆರ್ಪಿಪಿ ಪಕ್ಷದ ಸ್ಥಾಪಕ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಪಕ್ಷದ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು. ಪ್ರಸಕ್ತ ಚುನಾವಣೆಯಲ್ಲಿ ಗಾಲಿ ಲಕ್ಷ್ಮೀ ಅರುಣಾ ಅವರು ಸಾಕಷ್ಟು ಶ್ರಮ ಹಾಕಿದರು. ಆದರೆ ನಮ್ಮವರೇ ಕೆಲವರು ವಿರೋಧಿಗಳ ಜೊತೆ ಕೈ ಜೋಡಿಸಿ ಸೋಲಿಸಿದರು. ತಾವೂ ಸೋತು ಮನೆಯಲ್ಲಿ ಕೂತರು ಎಂದು ವ್ಯಂಗ್ಯವಾಡಿದರು.
ನಮ್ಮನ್ನು ನಂಬಿದ ಕಾರ್ಯಕರ್ತರನ್ನು ಕೈ ಬಿಡುವುದಿಲ್ಲ ಎಂದು ಹೇಳಿದ ರೆಡ್ಡಿ, ಲಕ್ಷ್ಮೀ ಅರುಣಾ ಅವರು ಚುನಾವಣೆಯಲ್ಲಿ ರಾಣಿ ಕಿತ್ತೂರು ಚೆನ್ನಮ್ಮರಂತೆ ಹೋರಾಡಿದರು. ಅವರು ಪ್ರತಿಪಕ್ಷವಾಗಿ ಬಳ್ಳಾರಿಯಲ್ಲಿ ಕೆಲಸ ಮಾಡಲಿದ್ದಾರೆ. ಚುನಾವಣೆ ಮುಗಿದ ಮೇಲೆ ರಾಜಕೀಯ ಮಾಡಬಾರದು, ಅಭಿವೃದ್ಧಿ ಮಾಡಬೇಕು. ನಾನು ಸಚಿವನಾಗಿದ್ದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ ಎಂದರು.
ಇತ್ತೀಚೆಗೆ ವಿಧಾನಸಭೆ ಅಧಿವೇಶನದ ಚರ್ಚೆಯಲ್ಲಿ ಭಾಗವಹಿಸಿ, ಬಳ್ಳಾರಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದೆ. ಸಚಿವ ಎಂ.ಬಿ.ಪಾಟೀಲ್ ಅವರು ಉತ್ತಮವಾಗಿ ಸ್ಪಂದಿಸಿದರು. ವಿಮಾನ ನಿಲ್ದಾಣ ನಿರ್ಮಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಾಕಿ ಕಾಮಗಾರಿ, ಬಳ್ಳಾರಿ-ಹಂಪಿ ಗ್ರೀನ್ ಫೀಲ್ಡ್ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಬಳ್ಳಾರಿಯ ಶಾಸಕರು, ಸಚಿವರು ಗಮನಹರಿಸಬೇಕು ಎಂದು ತಿಳಿಸಿದರು.
1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸುಷ್ಮಾ ಸ್ವರಾಜ್ ಪರಾಜಿತರಾದರು. ಆದರೆ ಬಳ್ಳಾರಿ ಜನರ ಪ್ರೀತಿಯನ್ನು ಕಂಡು ಅವರು ಪ್ರತಿ ವರ್ಷ ಬಳ್ಳಾರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುವುದಾಗಿ ಹೇಳಿದ್ದರು. ಅವರು ಬಂದಾಗ ಅದ್ಧೂರಿ ಕಲ್ಯಾಣ ಕೆಲಸ ಮಾಡಬೇಕು ಎಂಬ ಉದ್ಧೇಶದಿಂದ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬಂದೆವು. ಆದರೆ ರಾಜಕೀಯ ಕುತಂತ್ರದಿಂದ ನನ್ನನ್ನು ಬಳ್ಳಾರಿಯಿಂದ, ತಮ್ಮಿಂದ ಮತ್ತು ನನ್ನ ಕುಟುಂಬದಿಂದ ದೂರ ಮಾಡಿದರು ಎಂದು ದೂರಿದರು.