ಸಂಡೂರು (ಬಳ್ಳಾರಿ): ಜಿಲ್ಲಾ ಖನಿಜ ನಿಧಿಯ ಸಂಡೂರು ಸ್ವಯಂಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗಿರುವ ಹೊಲಿಗೆ ತರಬೇತಿಯಿಂದ ಮಹಿಳೆಯರು ಮಾಸ್ಕ್ ತಯಾರಿಕೆ ಮಾಡುತ್ತಿದ್ದು, ಖರೀದಿಗೆ ಕೈಗಾರಿಕೆಗಳು ಮುಂದೆ ಬಂದಿವೆ. ಇದಕ್ಕೆ ಜಿಲ್ಲಾಡಳಿತವು ಮಹಿಳಾ ಸ್ವಯಂ ಶಕ್ತಿ ಹಾಗೂ ಕೈಗಾರಿಕೆಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ತಿಳಿಸಿದ್ದಾರೆ.
ಇಲ್ಲಿನ ಭುಜಂಗನಗರ ಮತ್ತು ವಿಠ್ಠಲಾಪುರದ 176 ಮಹಿಳೆಯರಿಗೆ ತರಬೇತಿ ಹಾಗೂ ಹೊಲಿಗೆ ಯಂತ್ರ ಕೂಡಾ ನೀಡಲಾಗಿತ್ತು. ಅವರಿಗೆ ಕೊರೊನಾ ಸಂದರ್ಭದಲ್ಲಿ ಮರು ಬಳಕೆ ಮಾಡಬಹುದಾದ ಮಾಸ್ಕ್ಗಳ ತಯಾರಿಕೆಗೆ ತಿಳಿಸಲಾಗಿತ್ತು. ಮಾಸ್ಕ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಕಚ್ಚಾ ವಸ್ತು ಮತ್ತು ಮಾಸ್ಕ್ ಹೊಲಿಯುವುದಕ್ಕೆ ಬೇಕಾದ ಕೂಲಿ ಸೇರಿ ಪ್ರತಿ ಮಾಸ್ಕ್ಗೆ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.