ಬಳ್ಳಾರಿ:ಪದೇ ಪದೇ ಪ್ರಿಯಕರನೊಂದಿಗೆ ಓಡಿಹೋಗುತ್ತಿದ್ದಳು ಎನ್ನಲಾದ ವಿವಾಹಿತ ಪುತ್ರಿಯನ್ನು ತಂದೆ ನೇಣು ಹಾಕಿ ಕೊಲೆಗೈದ ಘಟನೆ ನಡೆದಿದೆ.
ಇಂಥದ್ದೊಂದು ಮನಕಲುಕುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯ ಗೋಡೆಹಾಳು ಗ್ರಾಮದಲ್ಲಿ ನಡೆದಿದೆ. ಗೋಡೆಹಾಳು ಗ್ರಾಮದ ನಿವಾಸಿ ಗೋಪಾಲರೆಡ್ಡಿ ಎಂಬಾತ ತನ್ನ ಮಗಳಾದ ಕವಿತಾ(22)ಳನ್ನು ಮರದ ಕೊಂಬೆಯೊಂದಕ್ಕೆ ನೇಣಿ ಬಿಗಿದು ಕೊಲೆ ಮಾಡಿದ್ದಾನೆ.
ಘಟನೆಯ ವಿವರ:
ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಕವಿತಾಗೆ ಮದುವೆಯಾಗಿತ್ತು. ಈ ದಂಪತಿಗೆ ಮಗು ಕೂಡಾ ಇದೆ. ಆದ್ರೆ ಕವಿತಾ ಮದುವೆಗೆ ಮುಂಚಿತವಾಗಿಯೇ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದು, ಮದುವೆಯಾದ ಬಳಿಕವೂ ಕವಿತಾ ತನ್ನ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು.
2019ನೇಯ ಡಿಸೆಂಬರ್ ತಿಂಗಳಲ್ಲಿ ಒಂದು ದಿನ ತನ್ನ ಮಗುವನ್ನು ಪಕ್ಕದ ಮನೆಯವರ ಬಳಿ ಕೊಟ್ಟು ನಾಪತ್ತೆಯಾಗಿದ್ದಳು. ಹೊಸಪೇಟೆ ತಾಲೂಕು ವ್ಯಾಪ್ತಿಯ ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ಪೋಷಕರು ದೂರು ನೀಡಿದ್ದರು. ಆ ಬಳಿಕ ಪೋಷಕರ ಸತತ ಹುಡುಕಾಟದ ಫಲವಾಗಿ ಕವಿತಾ ತನ್ನ ಪ್ರಿಯಕರನಾದ ಪ್ರಕಾಶ್ ಜೊತೆ ಸಿಕ್ಕಿಬಿದ್ದಿದ್ದಳು. ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಗೆ ಕರೆತಂದು ಕೌನ್ಸೆಲಿಂಗ್ ಮಾಡಿದ್ರೂ ಸಹ ಪ್ರಯೋಜನವಾಗಲಿಲ್ಲ.
ಕವಿತಾಳನ್ನು ಮನೆಗೆ ಕರೆದೊಯ್ದ ಪೋಷಕರು ಎಷ್ಟೇ ಬುದ್ದಿ ಮಾತು ಹೇಳಿದ್ರೂ ಸಹ ಆಕೆ ಪ್ರಿಯಕರನೊಂದಿಗೆ ವಾಸ ಮಾಡುವುದಾಗಿ ವಾದ ಮಾಡುತ್ತಿದ್ದಳಂತೆ. ಈ ಹಿನ್ನೆಲೆಯಲ್ಲಿ ಮಗಳನ್ನು ಕೊಲೆ ಮಾಡುವುದಕ್ಕೆ ತಂದೆ ಗೋಪಾಲ ರೆಡ್ಡಿ ಮುಂದಾಗಿದ್ದಾನೆ. ಗೋಪಾಲ ರೆಡ್ಡಿ ಹಾಗೂ ನಾಲ್ವರು ಸಹಚರರು ಗ್ರಾಮ ಹೊರವಲಯದ ಹೊಲಕ್ಕೆ ಮಗಳನ್ನು ಕರೆದೊಯ್ದಿದ್ದಾರೆ. ಬಳಿಕ ಬೇವಿನಮರದ ಕೊಂಬೆಗೆ ಕವಿತಾಳನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಎಲ್ಲರೂ ತಲೆಮರೆಸಿಕೊಂಡಿದ್ದರು.
ಹೊರವಲಯದಲ್ಲಿ ಮಹಿಳೆ ಶವ ಕಂಡ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಪಿ.ಡಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡಾಗ ಆಕೆಯ ತಂದೆ ನಾಲ್ವರು ಸಹಚರರೊಂದಿಗೆ ಸೇರಿ ಮಗಳ ಕೊಲೆ ಮಾಡಿರುವುದು ಬೆಳಕಿಗೆ ಬಂದಿತು.
ಆರೋಪಿ ಗೋಪಾಲ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.