ಕರ್ನಾಟಕ

karnataka

ETV Bharat / state

ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್​ಐಎ ಶೋಧ - ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ರೂವಾರಿ, ಟೆಕ್ಕಿಯೊಬ್ಬರ ದಾಖಲೆಗಳಲ್ಲಿ ಸಿಮ್ ಕಾರ್ಡ್ ಖರೀದಿಸಿದ್ದ ಎಂದು ತಿಳಿದುಬಂದಿದೆ.

ಮಂಗಳೂರು ಸ್ಫೋಟ ಪ್ರಕರಣ
ಮಂಗಳೂರು ಸ್ಫೋಟ ಪ್ರಕರಣ

By

Published : Nov 22, 2022, 11:23 AM IST

Updated : Nov 22, 2022, 11:51 AM IST

ಬಳ್ಳಾರಿ/ಮೈಸೂರು:ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದ ಆರೋಪಿ ಶಾರೀಕ್, ಸಿಮ್ ಕಾರ್ಡ್​ ಪಡೆಯಲು ಸಂಡೂರು ಮೂಲದ ಟೆಕ್ಕಿಯ ದಾಖಲೆಗಳನ್ನು ಕೊಟ್ಟಿದ್ದ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ. ಒಂದೂವರೆ ವರ್ಷದ ಹಿಂದೆ ಟೆಕ್ಕಿ ತನ್ನ ದಾಖಲಾತಿಗಳನ್ನು ಕಳೆದುಕೊಂಡಿದ್ದ ಎಂಬ ವಿಚಾರ ದೊರೆತಿದೆ.

ಅರುಣ್ ಕುಮಾರ್ ಗೌಳಿ ಎಂಬ ಟೆಕ್ಕಿ ಬೆಂಗಳೂರಲ್ಲಿ ತಮ್ಮ ದಾಖಲೆಗಳನ್ನು ಕಳೆದುಕೊಂಡಿದ್ದರಂತೆ. ಆ ದಾಖಲೆಗಳಲ್ಲಿ ಆರೋಪಿ ಸಿಮ್ ಕಾರ್ಡ್ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೂ ಟೆಕ್ಕಿಗೂ ಯಾವುದೇ ಸಂಪರ್ಕ ಇಲ್ಲ ಎಂದು ತನಿಖಾಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ.

ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ತಮ್ಮ ದಾಖಲೆ ಕಳೆದುಕೊಂಡಿರುವುದಾಗಿ ತನಿಖಾಧಿಕಾರಿಗಳಿಗೆ ಟೆಕ್ಕಿ ಹೇಳಿದ್ದಾನೆ ಎನ್ನಲಾಗುತ್ತಿದೆ. ಅರುಣ್ ಕುಮಾರ್ ಗೌಳಿ ಎಂಬಿಎ ಮತ್ತು ಎಂಜಿನಿಯರಿಂಗ್ ಪದವೀಧರನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಫೋಟದ ಪ್ರಮುಖ ಆರೋಪಿ ಶಾರೀಕ್​ಗೆ ಐಸಿಸ್‌ ಉಗ್ರ ಸಂಘಟನೆ ಪ್ರೇರಣೆ: ಎಡಿಜಿಪಿ ಅಲೋಕ್‌ ಕುಮಾರ್

ಪ್ರಕರಣದ ಸಂಬಂಧ ಮಾಹಿತಿ ಕಲೆ ಹಾಕಲು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಮೈಸೂರಿಗೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಮೈಸೂರಿನಲ್ಲಿ ಶಂಕಿತ ವಾಸವಿದ್ದ ಸ್ಥಳ, ಎಲ್ಲೆಲ್ಲಿ ಓಡಾಟ ನಡೆಸಿದ್ದ, ಯಾರ ಜೊತೆ ಒಡನಾಟವಿತ್ತು, ಯಾವ ಯಾವ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ವಿಳಾಸ ನೀಡಿ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪಡೆದಿದ್ದ ಹಾಗೂ ಎಲ್ಲಿ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ ಎಂಬ ಬಗ್ಗೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಐವರು ಅಧಿಕಾರಿಗಳ ತಂಡ ಸೋಮವಾರದಿಂದ ಮೈಸೂರಿನಲ್ಲಿ ಶೋಧ ಕಾರ್ಯ ಆರಂಭಿಸಿದೆ. ಜೊತೆಗೆ ಶಂಕಿತನ ಬಾಡಿಗೆ ರೂಂನಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಲಾಗಿದೆ.

ಸ್ಥಳೀಯ ಪೊಲೀಸರಿಂದ ತಪಾಸಣೆ:ಮೈಸೂರು ಪೊಲೀಸರು ನಗರದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಹೊರವಲಯದ ಬಡಾವಣೆಗಳಲ್ಲಿ ಹೊಸದಾಗಿ ಬಾಡಿಗೆ ಪಡೆದಿರುವ ಬಾಡಿಗೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಬಾಡಿಗೆ ನೀಡಿರುವ ಮಾಲೀಕರಿಂದ ಮಾಹಿತಿ ಪಡೆಯಲು ಸಹ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಈ ಮಧ್ಯೆ ಶಂಕಿತ ವಾಸವಿದ್ದ ಮನೆಗೆ ಪೊಲೀಸ್ ಕಾವಲು ಹಾಕಲಾಗಿದೆ.

ಸಿಸಿಟಿವಿ ಕಣ್ಗಾವಲು:ಪ್ರವಾಸಿಗರ ನಗರಿಯಾದ ಮೈಸೂರಿಗೆ ದೇಶದ ಎಲ್ಲಾ ಕಡೆಯಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡಲು ನಗರದ ಪ್ರಮುಖ ವೃತ್ತಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರವಾಸಿಗರ ತಾಣಗಳು, ಹೋಟೆಲ್​ಗಳ ಬಳಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲು ಸ್ಥಳೀಯ ಪೊಲೀಸರಿಗೆ ಹಾಗೂ ಗುಪ್ತಚರ ಇಲಾಖೆಗೆ ಸೂಚನೆ ನೀಡಲಾಗಿದೆ.

Last Updated : Nov 22, 2022, 11:51 AM IST

ABOUT THE AUTHOR

...view details