ಕರ್ನಾಟಕ

karnataka

ETV Bharat / state

ಪೆರೋಲ್ ಮೇಲೆ ಹೊರಗಡೆ ಬಂದಿದ್ದ ವ್ಯಕ್ತಿ ನಾಪತ್ತೆ: ಪತ್ತೆ ಹಚ್ಚಿದವರಿಗೆ ಒಂದು ಲಕ್ಷ ರೂ ಬಹುಮಾನ - ಪಾದಚಾರಿಗೆ ಕಾರು ಡಿಕ್ಕಿ

ಪೆರೋಲ್​ ರಜೆ ಅವಧಿ ಮುಗಿದರೂ ಮತ್ತೆ ಕಾರಾಗೃಹಕ್ಕೆ ಶರಣಾಗದೇ ತಲೆಮರೆಸಿಕೊಂಡಿರುವ ಅಪರಾಧಿಯ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸ್​ ಇಲಾಖೆ ಘೋಷಿಸಿದೆ.

Ramesh Yamanappa Parappagola
ರಮೇಶ ಯಮನಪ್ಪ ಪರಪ್ಪಗೋಳ

By

Published : Jan 27, 2023, 5:53 PM IST

ಮುದ್ದೇಬಿಹಾಳ:ಜೀವಾವಧಿ ಶಿಕ್ಷೆಗೊಳಗಾಗಿದ್ದ ತಾಲೂಕಿನ ಮುದ್ನಾಳದ ರಮೇಶ ಯಮನಪ್ಪ ಪರಪ್ಪಗೋಳ ಎಂಬವನು ಪೆರೋಲ್ ಮೇಲೆ ಹೊರ ಬಂದು ಮರಳಿ ಕೇಂದ್ರ ಕಾರಾಗೃಹಕ್ಕೆ ಹೋಗಿ ಶರಣಾಗದೇ ತಲೆಮರೆಸಿಕೊಂಡಿದ್ದು, ಇವನ ಸುಳಿವು ನೀಡಿದವರಿಗೆ ಜಿಲ್ಲಾ ಎಸ್​ಪಿ ಅವರು ಒಂದು ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.

ಎಸ್.ಸಿ.ನಂಬರ್ 81/2008ರ ಪ್ರಕರಣವೊಂದರಲ್ಲಿ ವಿಜಯಪುರದ ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶರು ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ಸಜಾಬಂಧಿ ಅಪರಾಧಿಯಾಗಿದ್ದನು. 2017ರ ಆಗಸ್ಟ್‌ 16 ರಂದು ಪೆರೋಲ್ ರಜೆಯ ಮೇಲೆ ತನ್ನ ಸ್ವಂತ ಊರು ಮುದ್ನಾಳ ಗ್ರಾಮಕ್ಕೆ ಬಂದಿದ್ದು, ಸೆಪ್ಟೆಂಬರ್‌ 16 ರಂದು ಪೆರೋಲ್ ರಜೆ ಅವಧಿ ಮುಗಿದು ಕೇಂದ್ರ ಕಾರಾಗೃಹಕ್ಕೆ ಹಾಜರಾಗಿ ಶರಣಾಗಬೇಕಿತ್ತು. ಆದರೆ, ಆತ ಹಾಗೆ ಮಾಡದೆ ಅಂದಿನಿಂದಲೇ ತಲೆಮರೆಸಿಕೊಂಡಿದ್ದಾನೆ.

ಭಾವಚಿತ್ರದಲ್ಲಿರುವ ಅಪರಾಧಿಯ ಸುಳಿವು ನೀಡಿದರೆ ಅವರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ. ಈತನ ಸುಳಿವು ಪತ್ತೆಯಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲವೇ ಪೊಲೀಸ್ ಕಂಟ್ರೋಲ್ ರೂಂ ಸಂಪರ್ಕಿಸಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಮಾಹಿತಿ ನೀಡಲು ಜಿಲ್ಲಾ ಎಸ್ಪಿ ಮೊ. 9480804201, ಪೊಲೀಸ್ ಕಂಟ್ರೋಲ್ ರೂಂ ದೂ: 0852- 250948, ಬಸವನ ಬಾಗೇವಾಡಿ ಉಪ ವಿಭಾಗ ಡಿವೈಎಸ್ಪಿ ಮೊ. 9480804221, ಮುದ್ದೇಬಿಹಾಳ ಸಿಪಿಐ ಮೊ: 9480804221, ದೂ: 08356-220332 ಸಂಪರ್ಕಿಸಲು ತಿಳಿಸಲಾಗಿದೆ.

ಪಿಎಸ್ಐ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದ ಚಾಲಾಕಿ: 50 ಮಹಿಳೆಯರಿಗೆ ವಂಚನೆ- ಚಿಕ್ಕೋಡಿ: ಪಿಎಸ್ಐ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು 50 ಮಹಿಳೆಯರಿಗೆ ವಂಚಿಸಿದ್ದ ಅಥಣಿ ಮೂಲದ ಆರೋಪಿ ಓರ್ವನನ್ನು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಥಣಿ ಮೂಲದ ವಿಜಯ ಬರಲಿ (28) ಎನ್ನುವ ಯುವಕ ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾನೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಅನಿಲ್​ ಕುಮಾರ್​ ಕುಂಬಾರ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು 50ಕ್ಕೂ ಅಧಿಕ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನವೆಂಬರ್ 2022 ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಅನಿಲ್​ ಕುಮಾರ್​ ಕುಂಬಾರ ತಮ್ಮ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದು ಪೋಟೊಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನಟ್ಟಿದ ಸಿಇಎನ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಬಿ ಆರ್ ಗಡ್ಡೇಕರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಕುರಿತಾಗಿ ವಿಚಾರಣೆ ನಡೆಸಿದಾಗ ಆರೋಪಿ 50ಕ್ಕೂ ಅಧಿಕ ಮಹಿಳೆಯರಿಗೆ ಉದ್ಯೋಗ ಹಾಗೂ ಇನ್ನಿತರ ಆಮಿಷ ಒಡ್ಡಿ ಸುಮಾರು 4 ಲಕ್ಷಕ್ಕೂ ಅಧಿಕ ಹಣ ಪಂಗನಾಮ ಹಾಕಿರುವುದು ಬಹಿರಂಗವಾಗಿದೆ.

ಕಾರು ಡಿಕ್ಕಿಯಾದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವು- ಬೆಂಗಳೂರು:ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ತಡರಾತ್ರಿ ಮೇಖ್ರಿ ಸರ್ಕಲ್ ಸಮೀಪದ ಖಾಸಗಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಕೈಯಲ್ಲಿ ವಯೋವೃದ್ಧ ವ್ಯಕ್ತಿಯೊಬ್ಬನ ಫೋಟೋ ಹಿಡಿದು ರಸ್ತೆ ದಾಟುತ್ತಿದ್ದ ಸರಿಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಗೆ ಕಾರು ಡಿಕ್ಕಿಯಾಗಿದೆ.

ಅಪಘಾತವಾದ ಕೂಡಲೇ ಸ್ಥಳೀಯರ ನೆರವಿನಿಂದ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಪ್ಪು ಬಣ್ಣದ ಬೆನ್ಜ್​ ಕಾರು ಡಿಕ್ಕಿ ಮಾಡಿ ವೇಗವಾಗಿ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವನ್ನಪ್ಪಿದ ಅಪರಿಚಿತ ಪಾದಚಾರಿಯ ಮಾಹಿತಿ ಕಲೆಹಾಕಲಾಗುತ್ತಿದೆ.

ಇದನ್ನೂ ಓದಿ:ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ.. ನಾಲ್ವರ ಸಾವು, ಐದು ಜನರಿಗೆ ಗಂಭೀರ ಗಾಯ

ABOUT THE AUTHOR

...view details