ಬಳ್ಳಾರಿ:ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಸಂಡೂರು ತಾಲೂಕು ತೋರಣಗಲ್ಲು ನಿವಾಸಿ ಎನ್.ಉಮೇಶ್ ಎಂಬಾತನಿಗೆ ಇಲ್ಲಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಮದ್ಯ ಸೇವನೆಗೆ ಹಣ ನೀಡುವಂತೆ ಉಮೇಶ್ ತನ್ನ ಪತ್ನಿ ಲಕ್ಷ್ಮಿಗೆ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಕುಡಿಯಲು ಹಣ ನೀಡುತ್ತಿಲ್ಲ ಎಂಬ ಸಿಟ್ಟಿಗೆ 2017 ರ ಫೆ.15 ರಂದು ಬೆಳಗ್ಗೆ ಹೆಂಡತಿ ಜೊತೆ ಜಗಳ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮಿಯನ್ನು ಜಿಂದಾಲ್‌ನ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಫೆ.21 ರಂದು ಮೃತಪಟ್ಟಿದ್ದಾಳೆ.
ಇದನ್ನೂ ಓದಿ:ಶಿವಮೊಗ್ಗ: ಬಾಲಕರ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದವನಿಗೆ 20 ವರ್ಷ ಕಠಿಣ ಶಿಕ್ಷೆ
ತನ್ನ ಸಾವಿಗೆ ಗಂಡನೇ ಕಾರಣ ಎಂದು ಲಕ್ಷ್ಮಿ ಸಮಕ್ಷಮದಲ್ಲಿ ಹೇಳಿಕೆ ಪಡೆದಿದ್ದ ಪೊಲೀಸರು, ಈ ಕುರಿತು ತೋರಣಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ ವಿವಾದ ಆಲಿಸಿದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ಎನ್.ಉಮೇಶ್ ಅಪರಾಧಿ ಎಂದು ಘೋಷಿಸಿ ಜೀವಾವಧಿ ಸಜೆ ಹಾಗೂ 20 ಸಾವಿರ ದಂಡ ಮತ್ತು ಮೃತಳ ಅಪ್ರಾಪ್ತ ಮಕ್ಕಳಿಗೆ 50 ಸಾವಿರ ದಂಡ ಪರಿಹಾರ ಕೊಡಬೇಕು. ಇದನ್ನು ಕೊಡದಿದ್ದರೆ ಅಪರಾಧಿಯ ಆಸ್ತಿಯಿಂದ ಪರಿಹಾರ ನೀಡಬೇಕು. ಮೃತಳ ಅಪ್ರಾಪ್ತ ಮಕ್ಕಳು ಸರ್ಕಾರದ ಯೋಜನೆಯಡಿಯಲ್ಲಿ ಸಂಬಂಧಿಸಿದ ಪ್ರಾಧಿಕಾರದಿಂದ ಸಹ ಪರಿಹಾರ ಪಡೆಯಬಹುದು ಎಂದು ಆದೇಶಿಸಿದ್ದಾರೆ.