ಬಳ್ಳಾರಿ:ವಿದ್ಯುತ್ ಕಂಬ ಏರಿ ರಿಪೇರಿ ಮಾಡುತ್ತಿರುವ ವೇಳೆ ಘೋರ ದುರಂತವೊಂದು ಸಂಭವಿಸಿದೆ. ವ್ಯಕ್ತಿಯೋರ್ವ ಕಂಬವೇರಿ ವಿದ್ಯುತ್ ತಂತಿ ಜೋಡಿಸಲು ಯತ್ನಿಸಿದ್ದು, ಶಾಕ್ ತಗುಲಿ ರುಂಡ, ಮುಂಡ ಬೇರ್ಪಟ್ಟು ಮೃತಪಟ್ಟ ಈ ಹೃದಯವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಗ್ರಾಮದ ಬದ್ರಿ ಎಂಬಾತ ವಿದ್ಯುತ್ ಕಂಬದ ಮೇಲೆಯೇ ಸಾವಿಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಹೊಲದಲ್ಲಿ ವಿದ್ಯುತ್ ಕಂಬವನ್ನು ಹತ್ತಿ ತಂತಿ ಜೋಡಿಸಲು ಮುಂದಾಗಿದ್ದನಂತೆ. ಆಗ ವಿದ್ಯುತ್ ಪ್ರವಹಿಸಿದ್ದು, ಕುತ್ತಿಗೆಗೆ ತಂತಿ ತಗುಲಿ ರುಂಡ ಹಾಗೂ ಮುಂಡವೇ ಬೇರ್ಪಟ್ಟಿದೆ.
ಪರಿಣಾಮ ವ್ಯಕ್ತಿಯ ದೇಹದ ಅರ್ಧ ಭಾಗ ಕಂಬದ ಮೇಲೆಯೇ ಉಳಿದಿದ್ದು, ರುಂಡ ಮಾತ್ರ ಕಟ್ ಆಗಿ ಕೆಳಗಡೆ ಬಿದ್ದಿದೆ. ಮೃತ ವ್ಯಕ್ತಿಯು ಖಾಸಗಿ ವ್ಯಕ್ತಿಯಾಗಿದ್ದು, ವಿದ್ಯುತ್ ನಿಗಮದ ನೌಕರನಲ್ಲ ಎಂದು ತಿಳಿದುಬಂದಿದೆ. ತಾನಾಗಿಯೇ ಕಂಬ ಏರಿ ವಿದ್ಯುತ್ ಲೈನ್ ಬದಲಾವಣೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಮಾಹಿತಿ ತಿಳಿದು ಗ್ರಾಮಸ್ಥರು ಘಟನಾ ಸ್ಥಳಕ್ಕೆ ಭಾರಿ ಸಂಖ್ಯೆಯಲ್ಲಿ ಧಾವಿಸಿದ್ದರು. ಕಂಬದ ಮೇಲೆಯೇ ಇದ್ದ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ:ಭಾರಿ ಅಗ್ನಿ ಅವಘಡದಲ್ಲಿ ತಾಯಿಯೊಂದಿಗೆ ಇಬ್ಬರು ಹೆಣ್ಣುಮಕ್ಕಳು ಸುಟ್ಟು ಭಸ್ಮ
ಪ್ರತ್ಯೇಕ ಘಟನೆ- ಗದಗದಲ್ಲಿ ಲಾರಿ ಚಾಲಕ ಸಾವು:ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟ್ರಕ್ಗೆ ಹಿಂಬದಿಯಿಂದ ಗೂಡ್ಸ್ ಲಾರಿ ಡಿಕ್ಕಿಯಾದ ಪರಿಣಾಮ, ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊಸಪೇಟೆ-ಹುಬ್ಬಳ್ಳಿ ಬೈಪಾಸ್ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ಮಧ್ಯರಾತ್ರಿ ಟೈರ್ ಸ್ಫೋಟಗೊಂಡ ಕಾರಣ ಟಕ್ನ್ನು ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಮತ್ತೊಂದು ಗೂಡ್ಸ್ ಲಾರಿ ಅದಕ್ಕೆ ಹಿಂಬದಿಯಿಂದ ರಭಸವಾಗಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗೂಡ್ಸ್ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತ ಚಾಲಕನ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಡಿಕ್ಕಿಯಾಗಿರುವ ಲಾರಿ ಆಂಧ್ರ ಮೂಲದ ಅನಂತಪುರದ್ದು ಎಂಬ ಮಾಹಿತಿ ಇದ್ದು, ಗೂಡ್ಸ್ ಲಾರಿಯಲ್ಲಿ ಕರಿಬೇವು ಸೊಪ್ಪು ಸಾಗಿಸಲಾಗುತ್ತಿತ್ತು. ಅಪಘಾತದ ರಭಸಕ್ಕೆ ಗೂಡ್ಸ್ ಲಾರಿ ಮುಂಭಾಗ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ 108 ಅಂಬ್ಯುಲೆನ್ಸ್, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಗೂಡ್ಸ್ ಲಾರಿಯ ಚಾಲಕನ ಶವ ಹೊರತೆಗೆದಿದ್ದಾರೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.