ಬಳ್ಳಾರಿ:ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಲ್ಲಿ ವಿಫಲವಾದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ತಕ್ಕಶಾಸ್ತಿ ನೀಡಲಾಗಿದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟದ ರಾಜ್ಯ ಸಮಿತಿಯ ಅಧ್ಯಕ್ಷ ಬಿ.ನರಸಪ್ಪ ದಂಡೋರ ಹೇಳಿದ್ದಾರೆ.
ಮಾದಿಗ ದಂಡೋರ ಮೀಸಲಾತಿ ಹೋರಾಟದ ರಾಜ್ಯ ಸಮಿತಿ ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಾರದಂತೆ ನೋಡಿಕೊಳ್ಳಲಾಗಿದೆ. ಮೊನ್ನೆ ತಾನೆ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಕೋಲಾರದಲ್ಲಿ ಕೆ ಹೆಚ್ ಮುನಿಯಪ್ಪ ಸೇರಿದಂತೆ ಇತರೆ ಘಟಾನುಘಟಿ ನಾಯಕರನ್ನು ಸೋಲಿಸುವಲ್ಲಿ ಮಾದಿಗ ಸಮುದಾಯ ಯಶಸ್ಸು ಕಂಡಿದೆ ಎಂದರು.
ದಶಕಗಳ ಕಾಲ ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಕೋರಿ ಹಲವಾರು ಹೋರಾಟಗಳನ್ನು ಮಾಡಲಾಗಿದೆಯಾದರೂ ಈವರೆಗೂ ಯಾವ ಸರ್ಕಾರವೂ ಮನಸ್ಸು ಮಾಡಲಿಲ್ಲ. ಎಡಗೈ, ಬಲಗೈ ಎಂಬ ತಾರತಮ್ಯ ನಡೆಯುತ್ತಿದೆ. ರಾಜ್ಯದಲ್ಲಿ ಸರಿಸುಮಾರು 75 ಲಕ್ಷ ಮಂದಿ ಮಾದಿಗ ಸಮುದಾಯದ ಜನರಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಸೋಲಿಗೆ ನಮ್ಮ ಸಮುದಾಯದ ಪಾತ್ರ ಪ್ರಬಲವಾಗಿದೆ ಎಂದರು.
ಮಾದಿಗರ ಕ್ರಾಂತಿ ಶುರು:
ಇನ್ಮುಂದೆ ನ್ಯಾ. ಎ ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಿ, ಆ ವರದಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡೋದರಲ್ಲಿ ನಿರ್ಲಕ್ಷ್ಯತನ ತಾಳುವ ಈ ಮೈತ್ರಿಕೂಟ ಸರ್ಕಾರದ ವಿರುದ್ಧ ಮಾದಿಗರ ಕ್ರಾಂತಿ ಶುರುವಾಗಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಮಾದಿಗ ಸಮುದಾಯವನ್ನು ಒಗ್ಗೂಡಿಸುವ ಮುಖೇನ ಬೃಹತ್ ಕ್ರಾಂತಿಕಾರಕ ಹೆಜ್ಜೆಯನ್ನಿಡುವ ನಿರ್ಧಾರವನ್ನು ಹೋರಾಟದ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಶೀಘ್ರ ಪ್ರಕಟಿಸಲಿದ್ದಾರೆ ಎಂದರು.