ಹೊಸಪೇಟೆ: ನಗರದ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಆವರಣದಲ್ಲಿ ಲಾರಿ ಚಾಲಕನನ್ನು ಬರ್ಬವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಹೊಸಪೇಟೆಯಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ.. ಎಪಿಎಂಸಿ ಆವರಣದಲ್ಲಿ ಬಡಾವಣೆ ಪೊಲೀಸ್ ಠಾಣೆಯಿದೆ. ಅದೇ ಠಾಣೆಯ 500 ಮೀಟರ್ ಅಂತರದಲ್ಲಿ ಲಾರಿ ಚಾಲಕ ಚಿದಾನಂದ (40) ಎಂಬಾತನ ಕೊಲೆ ಮಾಡಲಾಗಿದೆ. ಸದಾ ಜನರಿಂದ ಎಪಿಎಂಸಿ ಮಾರುಕಟ್ಟೆ ತುಂಬಿರುತ್ತದೆ. ಈ ನಡುವೆಯೇ ಪೊಲೀಸರ ಭಯಭೀತಿಯಿಲ್ಲದೆ ಕೊಲೆ ಮಾಡಲಾಗಿದೆ.
ಕಲ್ಲು, ಆಲ್ಕೋಹಾಲ್ ಪ್ಯಾಕೇಟ್ಪತ್ತೆ: ಲಾರಿ ಬಳಿ ದೊಡ್ಡ ಕಲ್ಲು ಹಾಗೂ ಆಲ್ಕೋಹಾಲ್ ಪ್ಯಾಕೇಟ್ ಪತ್ತೆಯಾಗಿವೆ. ಜೊತೆಗೆ ಶವದ ಪಕ್ಕ ಪ್ಲಾಸ್ಟಿಕ್ ಕವರ್ನಲ್ಲಿ ಊಟವನ್ನು ಪಾಸರ್ಲ್ ತಂದಿರುವುದನ್ನು ಬಿಸಾಡಲಾಗಿದೆ. ಚಿದಾನಂದ ಮಲಗಿದ್ದ ವೇಳೆ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಚಿದಾನಂದ ಅವರು ಮರಿಯಮ್ಮನಹಳ್ಳಿ ನಿವಾಸಿಯಾಗಿದ್ದು, ಇನ್ನೂ ವಿವಾಹವಾಗಿಲ್ಲ. ಕೆಲಸದ ನಿಮಿತ್ತ ಇಂದು ಬೆಳಗಿನ ಜಾವ ಧಾರವಾಡಕ್ಕೆ ತೆರಳಬೇಕಿತ್ತು. ಹಾಗಾಗಿ, ಎಪಿಎಂಸಿ ಬಳಿ ಲಾರಿಯಲ್ಲೇ ಮಲಗಿದ್ದರು. ಬೆಳಗ್ಗೆ ಲಾರಿ ಮಾಲೀಕ ಹಲವು ಬಾರಿ ಮೊಬೈಲ್ ಫೋನ್ಗೆ ಕರೆ ಮಾಡಿದ್ದಾರೆ.
ಆದರೆ, ಚಿದಾನಂದ ಕರೆ ಸ್ವೀಕರಿಸದ ಹಿನ್ನೆಲೆ ಬೇರೊಬ್ಬ ಕೆಲಸಗಾರನಿಗೆ ಕರೆ ಮಾಡಿ, ವಿಚಾರಿಸಿದ್ದಾರೆ. ಆ ಕೆಲಸಗಾರ ಲಾರಿಯನ್ನು ಪರಿಶೀಲಿಸಿದಾಗ ಚಿದಾನಂದನನ್ನು ಕೊಲೆ ಮಾಡಿರುವುದು ತಿಳಿದು ಬಂದಿದೆ.
ಇನ್ನು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಿಂದ ಶೋಧ ಕಾರ್ಯ ನಡೆಸಲಾಯಿತು. ಎಂಪಿಎಂಸಿ ಹಿಂಭಾಗದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿನ ಕಲ್ಲನ್ನು ತಂದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಈ ಕುರಿತು ಟಿಬಿ ಡ್ಯಾಂ ಸಿಪಿಐ ನಾರಾಯಣ ಅವರು ತನಿಖೆ ಮುಂದುವರೆಸಿದ್ದಾರೆ.
ಇನ್ನು, 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಚಿದಾನಂದ ಸಹೋದರ ಮಹಾಲಿಂಗ ಅವರು, 8 ವರ್ಷಗಳಿಂದ ಸಹೋದರ ಇಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಅಲ್ಲದೇ, ಕೆಲ ಸಂದರ್ಭದಲ್ಲಿ ಎಪಿಎಂಸಿಯಲ್ಲಿ ಮಲಗಿರುವುದುಂಟು. ತನಿಖೆ ಮೂಲಕ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.