ವಿಜಯನಗರ:ಲಾರಿಯೊಂದು ನಿಂತಿದ್ದ ಮಿನಿ ಲಾರಿಗೆ ಗುದ್ದಿದ ಪರಿಣಾಮ ಮೂವರು ಸಾವಿಗೀಡಾದ ಘಟನೆ ಕೂಡ್ಲಿಗಿ ಬಳಿಯ ಸಾಸಲವಾಡ ಕ್ರಾಸ್ ಬಳಿ ಇಂದು (ಶುಕ್ರವಾರ) ನಡೆಯಿತು. ಕೊಟ್ಟೂರು ತಾಲೂಕಿನ ಬತ್ತನಹಳ್ಳಿ ಗ್ರಾಮದ ಹತ್ತು ಮಂದಿ ಮಿನಿ ಲಾರಿಯಲ್ಲಿ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಾಲಯದ ದರ್ಶನ ಪಡೆಯಲು ಪ್ರವಾಸ ಹೊರಟಿದ್ದರು. ಈ ಸಂದರ್ಭದಲ್ಲಿ ರಸ್ತೆ ಮಧ್ಯೆ ದುರ್ಘಟನೆ ಸಂಭವಿಸಿದೆ.
ಮೃತರನ್ನು ಕೊಟ್ಟೂರು ತಾಲ್ಲೂಕಿನ ಗಜಾಪುರದ ಮಿನಿ ಲಾರಿ ಚಾಲಕ ಗುರುವಣ್ಣ (40), ಭತ್ತನಹಳ್ಳಿಯ ತಿಪ್ಪಣ್ಣ (55) ಹಾಗೂ ಬಸವರಾಜ (25) ಎಂದು ಗುರುತಿಸಲಾಗಿದೆ. ಬತ್ತನಹಳ್ಳಿಯ ತಿಪ್ಪಣ್ಣ ಹಾಗೂ ಸಂಬಂಧಿಕರು ಮಿನಿ ಲಾರಿಯಲ್ಲಿ ಹೊರಟು ಕೂಡ್ಲಿಗಿ ಕಡೆ ಬರುತ್ತಿದ್ದಾಗ ತಮ್ಮ ಸಂಬಂಧಿಕರಿಗಾಗಿ ಕಾಯುತ್ತಾ ಸಾಸಲವಾಡ ಕ್ರಾಸ್ ಬಳಿ ಮಿನಿ ಲಾರಿ ನಿಲ್ಲಿಸಿದ್ದರು. ವಾಹನದ ಹಿಂಭಾಗದಲ್ಲಿ ಗುರುವಣ್ಣ, ತಿಪ್ಪಣ್ಣ, ಬಸವರಾಜ ನಿಂತಿದ್ದರು. ಇದೇ ವೇಳೆ ಕೊಟ್ಟೂರು ಕಡೆಯಿಂದ ವೇಗವಾಗಿ ಬಂದ ಲಾರಿ, ಮಿನಿ ಲಾರಿಯ ಹಿಂದೆ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಗುರುವಣ್ಣ ಹಾಗೂ ತಿಪ್ಪಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸವರಾಜ ಕೂಡ್ಲಿಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮಿನಿ ಲಾರಿಯಲ್ಲಿದ್ದ ಕೆ.ನಾಗಪ್ಪ, ರಾಧಮ್ಮ, ರತ್ನಮ್ಮ, ಶ್ರವಣ ಕುಮಾರ, ಸ್ಯಾವಮ್ಮ, ಮಮತಾ ಹಾಗೂ ಭಗತ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣನಾದ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಶೋಧ ನಡೆಸಿದ ಪೊಲೀಸರು, ಅಪಘಾತ ಮಾಡಿದ ಲಾರಿ ಮತ್ತು ಚಾಲಕನನ್ನು ಬಳ್ಳಾರಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರಿಗೆ ಕಾರು ಡಿಕ್ಕಿ, ಮೂವರು ಸಾವು (ಇತ್ತೀಚಿನ ಘಟನೆ):ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕರಾವಳಿ ಹೋಟೆಲ್ ಸಮೀಪ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ನಿನ್ನೆ (ಗುರುವಾರ) ನಡೆದಿತ್ತು. ಹಾವೇರಿ ಜಿಲ್ಲೆಯ ಕಾಕೊಳ ತಾಂಡಾದ ನಿವಾಸಿಗಳಾದ ಚೆನ್ನಪ್ಪ, ರೇಖಪ್ಪ ಮತ್ತು ಮಹಂತಪ್ಪ ಮೃತಪಟ್ಟಿದ್ದರು. ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಹೋಗುತ್ತಿದ್ದ ಕಾರು, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿ ನಿಂತಿದ್ದ ಮೂವರಿಗೆ ಗುದ್ದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರ ಪೈಕಿ ಚೆನ್ನಪ್ಪ ಎಂಬವರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ರೇಖಪ್ಪ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತ್ತು. ಮಹಂತಪ್ಪ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ರಾಯಚೂರು ಬಳಿ ವೈದ್ಯನ ಕಾರಿನ ಮೇಲೆ ಗುಂಡಿನ ದಾಳಿ!