ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಕೊಡಾಲು ಗ್ರಾಮ ಹೊರವಲಯದ ಹೊಲದಲ್ಲಿ ರೈತಾಪಿ ಕೆಲಸ ಮಾಡುತ್ತಿದ್ದ ವೇಳೆ ರೈತನ ಮೇಲೆ ಚಿರತೆ ದಾಳಿ ನಡೆಸಿದೆ. ಈ ವೇಳೆ, ಪ್ರತಿ ದಾಳಿ ನಡೆಸಿ ರೈತ ತನ್ನ ಪ್ರಾಣವನ್ನು ಉಳಿಸಿಕೊಂಡು ಬಂದಿದ್ದಾನೆ.
ಕೊಡಾಲು ಗ್ರಾಮದ ರೈತ ಪಂಪಾಪತಿ ಎಂಬುವರ ಮೇಲೆ ಚಿರತೆ ದಾಳಿ ನಡೆಸಿತ್ತು. ಅದಕ್ಕೆ ಪ್ರತಿ ದಾಳಿ ನಡೆಸಿ, ಕಲ್ಲಿನಿಂದ ಚಿರತೆಯ ಮುಖಕ್ಕೆ ಹೊಡೆದೊಡಿಸಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
ಏನಿದು ಘಟನೆ:ತಮ್ಮ ಹೊಲದಲ್ಲಿ ಪಂಪಾಪತಿ ಕೆಲಸ ಮಾಡುತ್ತಿದ್ದ. ಹಿಂಬದಿಯಿಂದ ಸದ್ದಿಲ್ಲದೇ ಬಂದ ಚಿರತೆ ಏಕಾಏಕಿ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಗಾಬರಿಗೊಂಡಿದ್ದ ಪಂಪಾಪತಿ ಪ್ರತಿ ದಾಳಿ ನಡೆಸಲು ಮುಂದಾದ. ಕಲ್ಲನ್ನು ಕೈಯಲ್ಲಿ ಹಿಡಿದುಕೊಂಡು ಜೋರಾಗಿ ಚಿರತೆಯ ಮುಖಕ್ಕೆ ಎಸೆದಿದ್ದಾರೆ. ಗಾಯಗೊಂಡ ಚಿರತೆ ಮತ್ತೊಮ್ಮೆ ದಾಳಿ ನಡೆಸಲು ಯತ್ನಿಸಿದೆ. ಆದ್ರೂ ದೃತಿಗೆಡದೆ ಪಂಪಾಪತಿ ಮತ್ತೊಮ್ಮೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಚಿರತೆ ಮುಖಕ್ಕೆ ಪೆಟ್ಟಾಗಿ ಮೂರ್ಛೆ ಹೋಗಿದೆ. ಅಲ್ಲಿಂದ ಗ್ರಾಮ ದೊಳಗೆ ಓಡೋಡಿ ಬಂದಿದ್ದಾರೆ ಪಂಪಾಪತಿ.
ಇನ್ನು ರೈತ ಪಂಪಾಪತಿಗೆ ಮುಖ ಹಾಗೂ ತಲೆಯ ಭಾಗದಲ್ಲಿ ಸಣ್ಣ- ಪುಟ್ಟ ಗಾಯಗಳಾಗಿದ್ದು, ಗಾಯಾಳುವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಕ್ತ ಚಿಕಿತ್ಸೆ ಕೊಡಿಸಲು ಗ್ರಾಮಸ್ಥರು ಮುಂದಾಗಿ ಮಾನವೀಯತೆ ಮೆರೆದಿದ್ದಾರೆ.