ಬಳ್ಳಾರಿ:ಚಾಗನೂರು - ಸಿರವಾರ ಬಳಿ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ ಗತಿಯೇ ಈ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಪ್ರಕ್ರಿಯೆಗೆ ಆಗುತ್ತದೆ ಎಂದು ಹಿರಿಯ ವಕೀಲರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಎಚ್ಚರಿಕೆ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.
ನಗರದಲ್ಲಿರುವ ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಜಿಲ್ಲೆಯ ಕುರಿತಾದ ಪರ - ವಿರೋಧದ ಅಕ್ಷೇಪಣಾ ಅರ್ಜಿಗಳು ಸ್ವೀಕೃತಿಯಾಗಿರುವ ಸಂಖ್ಯಾಬಲ ಇಲ್ಲಿ ಪರಿಗಣನೆಗೆ ಬರಲ್ಲ. ರಾಜ್ಯ ಸರ್ಕಾರ ಮೊಂಡು ವಾದವನ್ನು ತಾಳಿದರೆ ಕಾನೂನಾತ್ಮಕ ಸಮಸ್ಯೆ ಎದುರಿಸಬೇಕಾಗುತ್ತದೆ. ವಿಜಯನಗರ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಮತ್ತೇನಾದರೂ ಆದೇಶ ಹೊರಡಿಸಿದ್ದೇ ಆದರೆ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಸೂಕ್ತ ಸಮಜಾಯಿಷಿ ನೀಡಬೇಕಾಗುತ್ತದೆ ಎಂದರು.