1.90 ಕೋಟಿ ರೂ. ವೆಚ್ಚದ ರಸ್ತೆ ಮರುಡಾಂಬರೀಕರಣಕ್ಕೆ ಭೂಮಿ ಪೂಜೆ
ಹುಡಾ ಕಚೇರಿ ಬಳಿ ರಾಜ್ಯ ಹೆದ್ದಾರಿ 49ರ ಹಂಪಿ ರಸ್ತೆಯಿಂದ ಹುಡಾ ಕಚೇರಿವರೆಗಿನ ಚತುಷ್ಪಥ ಬೈಪಾಸ್ ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೆ ತಾ.ಪಂ. ಅಧ್ಯಕ್ಷೆ ನಾಗವೇಣಿ ಬಸವರಾಜ ಭೂಮಿ ಪೂಜೆ ನೆರವೇರಿಸಿದರು.
ಬಳ್ಳಾರಿ/ಹೊಸಪೇಟೆ: ಶಾಸಕರ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ತಾ.ಪಂ. ಅಧ್ಯಕ್ಷೆ ನಾಗವೇಣಿ ಬಸವರಾಜ ಹೇಳಿದರು.
ನಗರದ ಹುಡಾ ಕಚೇರಿ ಬಳಿ ರಾಜ್ಯ ಹೆದ್ದಾರಿ 49ರ ಹಂಪಿ ರಸ್ತೆಯಿಂದ ಹುಡಾ ಕಚೇರಿವರೆಗಿನ ಚತುಷ್ಪಥ ಬೈಪಾಸ್ ರಸ್ತೆಯ ಮರುಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ 2019-20ನೇ ಸಾಲಿನ ಅಪೆಂಡಿಕ್ಸ್-ಇ ಯೋಜನೆಯ ಅಡಿಯಲ್ಲಿ ಮಂಜೂರಾದ, 1.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ದೊರೆತಿದ್ದು, ಪ್ರವಾಸಿಗರಿಗೆ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರ ಅಭಿವೃದ್ಧಿ ಕಾರ್ಯಗಳಲ್ಲಿ ಈ ಕಾಮಗಾರಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
ಹುಡಾ ಅಧ್ಯಕ್ಷ ಐಯಾಳಿ ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಿಶೋರ್ ಕುಮಾರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳಾದ ಅಶೋಕ, ಚಂದ್ರಕಾಂತ, ನಗರಸಭೆ ಇಂಜಿನಿಯರ್ ಮನ್ಸೂರ್, ಗುತ್ತಿಗೆದಾರ ಬಸವರಾಜ, ಸಂದೀಪ್ ಸಿಂಗ್ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.