ಬಳ್ಳಾರಿ :ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದಾರೆ. ಅವರೊಂದಿಗೆ ನಮ್ಮ ಶಾಸಕರು ಯಾವತ್ತೂ ಹೋಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅಧಿಕಾರ ಕಳೆದುಕೊಂಡವರ ಜೊತೆಗೆ ಬಿಜೆಪಿ ಶಾಸಕರು ಹೋಗುತ್ತಾರೆ ಅಂದ್ರೇ ಅದು ಹಗಲುಗನಸು. ಈ ಹಿಂದೆ ಅವರ ಜತೆಗಿದ್ದ ಕಾಂಗ್ರೆಸ್ ಶಾಸಕರನ್ನೇ ಅವರು ಉಳಿಸಿಕೊಳ್ಳಲಿಲ್ಲ. ಇದೀಗ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಈ ರಾಜ್ಯದಲ್ಲಿ ಕಾಂಗ್ರೆಸ್ನವರು ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲ್ಲ.
ಬಿಜೆಪಿ ಪಕ್ಷ ಒಂದು ಕುಟುಂಬ ಇದ್ದಂತೆ. ಕುಟುಂಬದಲ್ಲಿ ಭಿನ್ನಮತ ಬರುವುದು ಸಹಜ. ಅದನ್ನು ನಾವೆಲ್ಲರೂ ಕುಳಿತುಕೊಂಡು ಬಗೆಹರಿಸಿಕೊಳ್ಳುತ್ತೇವೆ ಎಂದರು.
ಪ್ರತಿಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಈಶ್ವರಪ್ಪ, ಅಧಿಕಾರ ಕಳೆದುಕೊಂಡ ಸಿದ್ದರಾಮಯ್ಯ ಒಂದು ಕಡೆ ಹೋದ್ರೆ ಡಿಕೆಶಿ ಮತ್ತೊಂದು ಕಡೆ ಹೋಗ್ತಾರೆ. ಪರ್ಯಾಯ ಲೀಡರ್ಗಳೇ ಇಲ್ಲ. ಯಾರಿದ್ದಾರೆ ಅನ್ನೋದನ್ನು ನೀವೇ ಹೇಳಿ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿ ನಾವು ಇದ್ರಲ್ಲಿ ರಾಜಕೀಯ ಮಾಡಿಲ್ಲ. ಕೊರೊನಾ ಸಮಯದಲ್ಲಿ ಇದು ಬೇಡ ಅಂದಿದ್ದೇವೆ ಅಷ್ಟೇ.. ಅದು ರಾಜಕೀಯ ಅಲ್ಲ ಎಂದರು. ಇದೇ ವೇಳೆ ಈ ಹಿಂದಿನ 20-20 ಮೈತ್ರಿ ಸರ್ಕಾರ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.