ವಿಜಯನಗರ: ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಹೇಳಿದರು. ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಮ್ಮಿಕೊಂಡಿರುವ ರಾಜ್ಯ ಪ್ರವಾಸದ ಕುರಿತು ವಿವರ ನೀಡಿದರು.
ಸೋನಿಯಾ ಗಾಂಧಿಯವರು ನನ್ನನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದೇವೆ. ಪಕ್ಷದ ಸಾಧನೆಗಳು, ಬಿಜೆಪಿಯ ವೈಫಲ್ಯಗಳ ಬಗ್ಗೆ ನಾವು ಜನರಿಗೆ ಮನವರಿಕೆ ಮಾಡ್ತಿದ್ದೇವೆ. ಬಿಜೆಪಿಯವರು ಯಾವ ಅಭಿವೃದ್ಧಿ ಮಾಡಿಲ್ಲ, ಆದರೂ ಹೆಚ್ಚು ಪ್ರಚಾರ ಪಡೆಯುತ್ತಾರೆ. ಅಲ್ಲದೇ ಅವರ ಪಕ್ಷದ ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂಬಿ ಪಾಟೀಲ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಬಿಜೆಪಿಯ ಮುಖ್ಯ ಹೃದಯವಾಗಿದೆ. ಬಿಜೆಪಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ಸಂವಿಧಾನವನ್ನು ವಿರೋಧಿಸುತ್ತಾ ಬಂದಿದ್ದಾರೆ. 52 ವರ್ಷಗಳ ನಂತರ ನಾಗ್ಪುರದ ಆರ್ಎಸ್ಎಸ್ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸಿದವರು ಇವರು ಎಂದು ಕಿಡಿ ಕಾರಿದರು.
2014ರ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಕೇವಲ ಘೋಷಣೆ ಮಾಡುತ್ತಿದೆ. ಉದ್ಯೋಗ ಸೃಷ್ಟಿ ಮಾಡುವುದಿರಲಿ, ಇದ್ದ ಉದ್ಯೋಗವು ಹೋಯಿತು. ಕಪ್ಪು ಹಣ ತರುತ್ತೇವೆ ಎಂದರು. ಅದು ಏನಾಯ್ತು?, ಊಟದ ಮೇಲೂ ಜಿಎಸ್ಟಿ, ಹಾಲು ಮೊಸರು ಸೇರಿದಂತೆ ಎಲ್ಲದರ ಮೇಲೆಯೂ ಜಿಎಸ್ಟಿ. ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಅದಾನಿ, ಅಂಬಾನಿ ಅವರ ಸಾಲ ಮನ್ನಾ ಮಾಡ್ತಾರೆ ಎಂದು ಟೀಕಿಸಿದರು.
40 ಪರ್ಸೆಂಟ್ ಕಮಿಷನ್: ರಾಜ್ಯದ ಬಹುತೇಕ ಇಲಾಖೆಗಳಲ್ಲಿ ಶೇ.40 ಕಮಿಷನ್ ಇದೆ. ಇದನ್ನು ಕಾಂಗ್ರೆಸ್‌ನವರು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘವೇ ಹೇಳಿದೆ. ಈ ಬಗ್ಗೆ ಪ್ರಧಾನಿಗೆ ಪತ್ರ ಕೂಡ ಬರೆದಿದ್ದಾರೆ. ಜನ ಬೇಸತ್ತಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಬಿಬಿಎಂಪಿಯಲ್ಲಿ 50 ಪರ್ಸೆಂಟ್ ಕಮಿಷನ್ ಇದೆ. ಚುನಾವಣೆ ಹತ್ತಿರ ಬಂದಂತೆ ಕಮಿಷನ್ ಪ್ರಮಾಣ 70- 80 ಪರ್ಸೆಂಟ್ ಆಗಬಹುದೇನೋ? ಎಂದು ಅವರು ಆರೋಪಿಸಿದರು.