ಬಳ್ಳಾರಿ:14,500 ಅತಿಥಿ ಉಪನ್ಯಾಸಕರನ್ನು ಕೈಬಿಡಬೇಡಿ. ಸೇವಾ ಭದ್ರತೆ, ವೇತನವನ್ನು ನೀಡಿ ಎಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಡಾ. ಟಿ.ದುರ್ಗಪ್ಪ ಹೇಳಿದರು.
ಅತಿಥಿ ಉಪನ್ಯಾಸಕರ ಆತ್ಮಹತ್ಯೆ ವೈಯಕ್ತಿಕ ಅಲ್ಲ, ಅದು ಸರ್ಕಾರದ ವೈಫಲ್ಯ: ಡಾ. ಟಿ.ದುರ್ಗಪ್ಪ ಗಣಿನಾಡು ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು ಮತ್ತು ಎ.ಐ.ಡಿ.ವೈ.ಒ ನೇತೃತ್ವದಲ್ಲಿ ಪದವಿ ಉಪನ್ಯಾಸಕರು ಮತ್ತು ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಿ ಮತ್ತು ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಈಟಿವಿ ಭಾರತದೊಂದಿಗೆ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕ ಜಿಲ್ಲಾ ಅಧ್ಯಕ್ಷ ಡಾ. ಟಿ.ದುರ್ಗಪ್ಪ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ 14,500 ಅತಿಥಿ ಉಪನ್ಯಾಸಕರು ಇದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರು ಸಕಾಲಕ್ಕೆ ಅತಿಥಿ ಉಪನ್ಯಾಸಕರಿಗೆ ವೇತನ ನೀಡದೆ ಇರುವುದರಿಂದ ಮಾನಸಿಕ ಆಘಾತಕ್ಕೆ ಒಳಗಾಗಿ ರಾಜ್ಯದಲ್ಲಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಅತಿಥಿ ಉಪನ್ಯಾಸಕರ ಆತ್ಮಹತ್ಯೆ ವೈಯಕ್ತಿಕ ಅಲ್ಲ. ಅದು ಸರ್ಕಾರದ ವೈಫಲ್ಯವಾಗಿದೆ. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಎಲ್ಲಿಯಾದಾರೂ ಅತಿಥಿ ಉಪನ್ಯಾಸಕರಿಗೆ ಶೋಷಣೆ ನಡೆಯುತ್ತಿದೆ ಎಂದರೆ ಅದು ಕರ್ನಾಟಕದಲ್ಲಿ ಮಾತ್ರ ಎಂದರು. ಯಾವುದೇ ಕಾರಣಕ್ಕೂ 14,500 ಅತಿಥಿ ಉಪನ್ಯಾಸಕರನ್ನು ಕೈಬಿಡಬಾರದು ಎಂದು ಆಗ್ರಹಸಿದರು.