ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತುಮಟಿ-ವಿಠಲಪುರ ಹಾಗೂ ನೆರೆಯ ಆಂಧ್ರಪ್ರದೇಶ ರಾಜ್ಯದ ಗಡಿಗೆ ಅಂಟಿಕೊಂಡಿರುವ ಓಬಳಾಪುರಂ ಮೈನಿಂಗ್ ಕಂಪನಿ ಮಧ್ಯೆ ಇರುವ ಗಡಿಗುರುತು ನಾಶಪಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಂದಿನಿಂದ ಕರ್ನಾಟಕಾಂಧ್ರ ಗಡಿ ಸರ್ವೇ ಕಾರ್ಯ ಮತ್ತೆ ಶುರುವಾಗಿದೆ.
ಸರ್ವೇ ಆಫ್ ಇಂಡಿಯಾ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯದ ಕಂದಾಯ ಹಾಗೂ ಸರ್ವೇ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರವರ್ಗ ಈ ಸರ್ವೇ ಕಾರ್ಯದಲ್ಲಿ ಭಾಗಿಯಾಗುತ್ತಿದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಬಳ್ಳಾರಿ ಎಡಿಎಲ್ ಆರ್.ಸುಮಾನಾಯ್ಕ, ಸರ್ವೇ ಕಾರ್ಯಾರಂಭ ಆಗಿರೋದು ನಿಜ. ಆದರೆ, ಯಾವ ಯಾವ ಇಲಾಖೆಗಳ ಅಧಿಕಾರಿಗಳು ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆಂಬ ಮಾಹಿತಿ ಈವರೆಗೂ ಲಭ್ಯವಾಗಿಲ್ಲ ಎಂದರು.
ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ ಮಾತನಾಡಿ, ಸರ್ವೇ ಆಫ್ ಇಂಡಿಯಾದವರು ಸರ್ವೇ ಕಾರ್ಯದಲ್ಲಿ 1896 ನಕ್ಷೆಯ ಬಳಕೆಯನ್ನು ಸರಿಯಾಗಿ ಮಾಡಿಲ್ಲ. ತುಮಟಿ- ವಿಠಲಪುರ ಗ್ರಾಮಗಳ ಟ್ರೈಜಂಕ್ಷನ್, ಬೈಜಂಕ್ಷನ್ ಪಾಯಿಂಟ್ಸ್ ಅನ್ನು ಹೇಗೆ ಮಾಡಿದ್ದೀರಿ ಎಂದು ಡಿಸಿಯವರು ಸರ್ವೇ ಆಫ್ ಇಂಡಿಯಾಕ್ಕೆ ಪತ್ರ ಬರೆದ ಕೂಡಲೇ ಸರ್ವೇಕಾರ್ಯ ಸ್ಥಗಿತಗೊಂಡಿತ್ತು. ಬ್ರಿಟಿಷ್ ಕಾಲದ 1887 ನಕ್ಷೆ ಪ್ರಕಾರ ಸರ್ವೇ ಕಾರ್ಯ ಆಗಬೇಕಿತ್ತು. ಹೀಗಾಗಿ, ಈ ಹಿಂದೆ ನಡೆದ ಸರ್ವೇಕಾರ್ಯವು ಅವೈಜ್ಞಾನಿಕವಾಗಿದೆ. 1896ರ ನಕ್ಷೆ ಸರ್ವೇಗೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ಗೆ ಇದೇ ಸರ್ವೇ ಆಫ್ ಇಂಡಿಯಾದವರೇ ಸಲ್ಲಿಸಿದ್ದಾರೆ. ಈಗ ಅದನ್ನೇ ಏಕೆ ಬಳಸುತ್ತಿರೋದು ಅಂತ ನನಗಂತೂ ಅರ್ಥವಾಗುತ್ತಿಲ್ಲ. 1887 ನಕ್ಷೆಯ ಪ್ರಕಾರ ಸರ್ವೇಕಾರ್ಯ ನಡೆಸಬೇಕು. ಅಗಮಾತ್ರ ಗ್ರಾಮಗಳ ಸರಹದ್ದು ಫಿಕ್ಸ್ ಆಗುತ್ತೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಹುಬ್ಬಳ್ಳಿಯ ‘ಪವರ್’ ಗರ್ಲ್ ಸಾಧನೆ; ಯುವತಿಗೆ ಬೇಕಿದೆ ನೆರವಿನ ಹಸ್ತ