ಹೊಸಪೇಟೆ (ಬಳ್ಳಾರಿ) :ಬದುಕನ್ನು ಹಸನುಗೊಳಿಸಲು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರಲು ಡಾ.ಬಿ.ಆರ್. ಅಂಬೇಡ್ಕರ್ ಅವಿರತವಾಗಿ ಶ್ರಮಿಸಿದ್ದಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ. ರಮೇಶ ಅವರು ತಿಳಿಸಿದರು. ತಾಲೂಕಿನ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಸರಳವಾಗಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿ ಹಾಗೂ ಡಾ. ಬಾಬು ಜಗಜೀವನರಾಮ್ ಅವರ113 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್, ಬಾಬು ಜಗಜೀವನರಾಮ್ ಚಿಂತನೆಗಳು ಎಲ್ಲರಿಗೂ ಮಾದರಿ: ಡಾ. ಸ.ಚಿ. ರಮೇಶ - Kannada university Chancellor said Ambedkar is role model to everyone
ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 129 ನೇ ಜಯಂತಿ ಆಗಿದ್ದು ಹೊಸಪೇಟೆಯ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
![ಅಂಬೇಡ್ಕರ್, ಬಾಬು ಜಗಜೀವನರಾಮ್ ಚಿಂತನೆಗಳು ಎಲ್ಲರಿಗೂ ಮಾದರಿ: ಡಾ. ಸ.ಚಿ. ರಮೇಶ Ambedkar jayanti](https://etvbharatimages.akamaized.net/etvbharat/prod-images/768-512-6788794-324-6788794-1586887143475.jpg)
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಅಂತರದ ನಿರ್ಮೂಲನೆ, ಅಸ್ಪೃಶ್ಯತೆ ನಿವಾರಣೆ, ಜಾತಿ ವಿನಾಶ, ಅಂತರ್ಜಾತಿ ವಿವಾಹದ ಬಗ್ಗೆ ಎಚ್ಚರಿಸಿದರು. ದೇಶದಲ್ಲಿ ಸಾಮಾಜಿಕ ಕ್ರಾಂತಿಗೆ ಶ್ರಮಿಸಿದ ಬಸವಣ್ಣ, ಬುದ್ಧ, ಮಹಾತ್ಮಗಾಂಧಿ, ಸ್ವಾಮಿ ವಿವೇಕಾನಂದ ಅವರಂತಹ ಮಹನೀಯರಂತೆ ಅಂಬೇಡ್ಕರ್ ಅವರೂ ಶ್ರಮಿಸಿದ್ದಾರೆ. ಬಹಳಷ್ಟು ಶ್ರೇಷ್ಠ ವ್ಯಕ್ತಿಗಳು ಏಪ್ರಿಲ್ ತಿಂಗಳಲ್ಲೇ ಜನಿಸಿದ್ದಾರೆ. ಜೈನ ಧರ್ಮವನ್ನು ಸಾರಿದ ಮಹಾವೀರ, ದಲಿತರಿಗೆ ಸಾಮಾಜಿಕ ಸಮಾನತೆಯನ್ನು ತರಲು ಶಿಕ್ಷಣ ನೀಡಿದ ಜ್ಯೋತಿಬಾ ಫುಲೆ, ದೇಶದ ಉಪ ಪ್ರಧಾನಿಯಾಗಿ ಮತ್ತು ರಕ್ಷಣಾ ಸಚಿವರಾಗಿ ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಿದ ಡಾ. ಬಾಬು ಜಗಜೀವನರಾಮ್ ಹಾಗೂ ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರೆಲ್ಲರೂ ಏಪ್ರಿಲ್ ತಿಂಗಳಲ್ಲಿ ಜನಿಸಿದ್ದಾರೆ.
ಡಾ.ಬಾಬು ಜಗಜೀವನರಾಮ್ ಅವರು ರೈತರ ಪರ ನಿಂತು ಹಸಿರುಕ್ರಾಂತಿ ಹರಿಕಾರ ಎನಿಸಿಕೊಂಡರು. ರಕ್ಷಣಾ ಮಂತ್ರಿಗಳಾಗಿ ಇಂಡೋ-ಪಾಕ್ ಯುದ್ಧದಲ್ಲಿ ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ವೈಜ್ಞಾನಿಕವಾಗಿ ಆಲೋಚಿಸಿ ದೇಶಕ್ಕೆ ಒಂದು ಉತ್ತಮ ಸಂವಿಧಾನ ಹಾಗೂ ರೈತರ ಪರ ನಿಂತು ತಳ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರು ಕೇವಲ ದಲಿತ ಸಮುದಾಯಗಳಿಗೆ ಮಾತ್ರ ಸೀಮಿತವಾಗದೆ ದೇಶದಲ್ಲಿರುವ ಸಮಾಜಕ್ಕೆ ವ್ಯವಸ್ಥಿತವಾಗಿ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ಎಲ್ಲರೂ ಜನ ಸಮಾನ್ಯರ ನೋವಿಗೆ ಸ್ಪಂದಿಸಬೇಕು ಎಂದು ಹೇಳಿದರು.