ಬಳ್ಳಾರಿ: ಈ ಬಾರಿಯ ಕಸಾಪ ಚುನಾವಣೆ ಅಖಂಡ ಬಳ್ಳಾರಿ ಜಿಲ್ಲೆ ಒಳಗೊಂಡಂತೆ ನಡೆಯಲಿದೆ ಎಂದು ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿ ನಗರದ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿರಿಗೇರಿ ಯರಿಸ್ವಾಮಿ ಅವರು, ವಿಜಯನಗರ ಪ್ರತ್ಯೇಕ ಜಿಲ್ಲೆ ಘೋಷಣೆಯಾಗಿರುವುದರಿಂದ ಜಿಲ್ಲೆಯ ಮತದಾರರಲ್ಲಿ ಬಹಳಷ್ಟು ಗೊಂದಲವಿದೆ. ಹೀಗಾಗಿ, ಸೆಪ್ಟೆಂಬರ್ ತಿಂಗಳಲ್ಲಿ ನಡೆದ ರಾಜ್ಯ ಕಸಾಪ ಕಾರ್ಯಕಾರಿ ಸಭೆಯಲ್ಲಿ ಅಖಂಡ ಬಳ್ಳಾರಿ ಒಳಗೊಂಡಂತೆಯೇ ಕಸಾಪ ಚುನಾವಣೆ ನಡೆಸುವುದರ ಕುರಿತು ನಿರ್ಧರಿಸಲಾಗಿದೆ. ಯಾಕೆಂದರೆ, ಆ ಕಾರ್ಯಕಾರಿ ಸಭೆ ನಡೆಯುವಾಗ ವಿಜಯನಗರ ಜಿಲ್ಲೆಯ ಘೋಷಣೆ ಅಧಿಕೃತವಾಗಿರಲಿಲ್ಲ. ಹಾಗಾಗಿ ಈ ಬಾರಿಯ ಕಸಾಪ ಚುನಾವಣೆಯು ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಳಗೊಂಡಂತೆಯೇ ನಡೆಯಲಿದೆ ಎಂದರು.
ಇನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನರಾಜ ಮಾತನಾಡಿ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು ಪುಸ್ತಕ ರೂಪದಲ್ಲಿ ತರುತ್ತಿರುವೆ. ಗಣಿ ಜಿಲ್ಲೆಯಲ್ಲಿ ಅಂದಾಜು 21 ಸಾಹಿತ್ಯ ಸಮ್ಮೇಳನಗಳು ನಡೆದಿದೆ. ಈವರೆಗೂ ಕೂಡ ಅಂದಾಜು 16 ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳ ಪ್ರತಿಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿರುವೆ ಎಂದು ತಿಳಿಸಿದರು.
ಅಭಿನಂದನಾ ಸಮಾರಂಭ:
89 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರಾದ ಪ್ರೊ.ದೊಡ್ಡರಂಗೇಗೌಡರಿಗೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ನಾಳೆಯ ದಿನ ಸಮ್ಮೇಳನಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಸಿರಿಗೇರಿ ಯರಿಸ್ವಾಮಿ ತಿಳಿಸಿದರು.