ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯ ವಿರೋಧ ಹೋರಾಟಕ್ಕೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಒಕ್ಕೂಟವು ಕರೆ ನೀಡಿದ್ದ ಒಂದು ದಿನದ ಸಾಂಕೇತಿಕ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಇಲ್ಲಿನ ನಗರೂರು ನಾರಾಯಣರಾವ್ ಉದ್ಯಾನದ ಬಳಿ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ ನೇತೃತ್ವದಲ್ಲಿ ನೂರಾರು ಮಂದಿ ಕನ್ನಡ ಪರ ಕಾರ್ಯಕರ್ತರು ಪಾಲ್ಗೊಂಡು ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಬಳಿಕ, ತೆರೆದ ವಾಹನದಲ್ಲಿ ನಗರೂರು ನಾರಾಯಣ ರಾವ್ ಉದ್ಯಾನದಿಂದ ಗಡಿಗಿ ಚನ್ನಪ್ಪ ವೃತ್ತ, ಸುಕೋ ಬ್ಯಾಂಕ್ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರೆವಣಿಗೆ ನಡೆಸಿದ್ರು. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ ಅವರು, ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಗೆ ನಾನಂತೂ ಸುತಾರಾಂ ಒಪ್ಪಲ್ಲ.
ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ನನ್ನ ವಿರೋಧವಿದೆ. ಈ ಸಂಬಂಧ ನಾನಂತೂ ಜೈಲಿಗೆ ಹೋದ್ರೂ ಪರವಾಗಿಲ್ಲ. ಈ ಹೋರಾಟ ಹಾಗೂ ಗಣಿ ಜಿಲ್ಲೆಯ ವಿಭಜನೆಗೆ ಬಿಡಲ್ಲ ಎಂದರು. ಇದಲ್ಲದೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದನ್ನು ಖಂಡಿಸಿ ಡಿಸೆಂಬರ್ 5ರಂದು ಇಡೀ ಕರ್ನಾಟಕ ಬಂದ್ ಮಾಡಲಾಗುತ್ತಿದ್ದು, ಈ ಕೂಡಲೇ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಮರಾಠ ಅಭಿವೃದ್ಧಿ ನಿಗಮವನ್ನ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಬಳಿಕ ಮಾತನಾಡಿದ ಸಾ.ರಾ.ಗೋವಿಂದ ಅವರು, ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರೋದರಿಂದ ಕನ್ನಡಿಗರಿಗೆ ಭಾರೀ ಅವಮಾನ ಆಗುತ್ತೆ. ಮರಾಠ ಸಮುದಾಯದ ಅಭಿವೃದ್ಧಿಗೆ ಹಣ ಮೀಸಲಿಡಿ ಹೊರತು, ಅದರ ಹೆಸರಿನಡಿ ಅಭಿವೃದ್ಧಿ ನಿಗಮ ಸ್ಥಾಪಿಸೋದನ್ನ ಕೈಬಿಡಿ.
ಇಲ್ಲಾಂದ್ರೆ, ನವೆಂಬರ್ 1ರಂದು ಆಚರಿಸುವ ಕರ್ನಾಟಕ ದಿನಾಚರಣೆಯನ್ನ ಕರಾಳ ದಿನವನ್ನಾಗಿ ಆಚರಿಸಲಾಗುತ್ತೆ. ಅಲ್ಲದೇ, ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯನ್ನ ಮೊದಲು ಈ ಸರ್ಕಾರ ಕೈ ಬಿಡಬೇಕು. ನಾವಂತೂ ಯಾವುದೇ ಕಾರಣಕ್ಕೂ ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡಲು ಬಿಡೋದಿಲ್ಲ ಎಂದು ಸಾ.ರಾ.ಗೋವಿಂದ ಎಚ್ಚರಿಕೆ ನೀಡಿದ್ದಾರೆ.
ಈ ಹೋರಾಟದಲ್ಲಿ ನಾನಾ ಸಂಘಟನೆಗಳ ಮುಖಂಡರಾದ ಸಿರಿಗೇರಿ ಪನ್ನರಾಜ, ಟಪಾಲ್ ಗಣೇಶ, ಕುಡಿತಿನಿ ಶ್ರೀನಿವಾಸ, ದರೂರು ಪುರುಷೋತ್ತಮಗೌಡ, ಶ್ರೀಧರಗೌಡ ಜಾಲಿಹಾಳು, ಟಿ.ಜಿ.ವಿಠಲ, ಸಿದ್ಮಲ್ ಮಂಜುನಾಥ, ಕೆ.ಎರಿಸ್ವಾಮಿ, ಬಿ.ಎಂ. ಪಾಟೀಲ, ಮುಂಡರಗಿ ನಾಗರಾಜ, ಬಸವರಾಜ ಬಿಸಿಲಹಳ್ಳಿ, ಪರ್ವೀನ್ ಬಾನು ಸೇರಿದಂತೆ ನೂರಾರು ಕಾರ್ಯಕರ್ತ ಮುಖಂಡರು ಹಾಜರಿದ್ದರು.