ಬಳ್ಳಾರಿ: ರಾಜಕೀಯ ನಾಯಕರ ಜಿದ್ದಾಜಿದ್ದಿನ ಕಣವಾಗಿದ್ದ ಕಂಪ್ಲಿ ಪಟ್ಟಣದ ಪುರಸಭೆ ಆಡಳಿತದ ಗದ್ದುಗೆ ಶುಕ್ರವಾರ ಬಿಜೆಪಿ ಪಾಲಾಗಿದೆ. ಬಹುಮತದ ಬಿಜೆಪಿಯು ಇಲ್ಲಿನ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದೆ.
ನೂತನ ಅಧ್ಯಕ್ಷೆಯಾಗಿ ವಿ.ಶಾಂತಲಾ ಹಾಗೂ ಉಪಾಧ್ಯಕ್ಷೆಯಾಗಿ ಕೆ.ನಿರ್ಮಲ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪ್ರವರ್ಗ-ಎ ಮೀಸಲಾಗಿತ್ತು. ಈ ಎರಡು ಮೀಸಲಾತಿ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ಮಧ್ಯಾಹ್ನ 1 ಗಂಟೆ ಒಳಗಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವಿ.ಶಾಂತಲಾ ಹಾಗೂ ಕಾಂಗ್ರೆಸ್ ನಿಂದ ಸುಶೀಲಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೆ.ನಿರ್ಮಲ ಹಾಗೂ ಕಾಂಗ್ರೆಸ್ ನಿಂದ ಎಂ.ಉಸ್ಮಾನ್ ನಾಮಪತ್ರ ಸಲ್ಲಿಸಿದ್ದರು. ನಂತರ ನಾಮಪತ್ರಗಳ ಪರಿಶೀಲನೆ ನಡೆಯಿತು.
ತದನಂತರ ನಾಮಪತ್ರ ಹಿಂಪಡೆಯಲು ಕೆಲ ನಿಮಿಷ ಕಾಲಾವಕಾಶದಲ್ಲಿ ಯಾರೂ ನಾಮಪತ್ರ ಹಿಂಪಡೆಯದ ಕಾರಣ ಚುನಾವಣೆಗೆ ಸಾಕ್ಷಿಯಾಯಿತು. ನಂತರ ನಡೆದ ಚುನಾವಣೆಯಲ್ಲಿ 12 ಜನ ಸದಸ್ಯರ ಬೆಂಬಲದೊಂದಿಗೆ ವಿ.ಶಾಂತಲಾ ಅವರು ನೂತನ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಕೆ.ನಿರ್ಮಲ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಗೌಸಿಯಾ ಬೇಗಂ ಘೋಷಿಸಿದರು.