ಬಳ್ಳಾರಿ:ಜೆಎಸ್ಡಬ್ಲ್ಯು ಸಂಸ್ಥೆ ತನ್ನ ಕಾರ್ಮಿಕರೊಂದಿಗೆ ಅತ್ಯಂತ ಅಮಾನವೀಯವಾಗಿ ವರ್ತಿಸುತ್ತಿದ್ದು, ಸುಖಾಸುಮ್ಮನೆ ಕೆಲಸದಿಂದ ವಜಾ ಮಾಡಿ ನೋಟಿಸ್ ಕಳುಹಿಸುತ್ತಿದೆ ಎಂದು ಜೆಡಿಎಸ್ ಮುಖಂಡ, ಬುಡಾ ಮಾಜಿ ಅಧ್ಯಕ್ಷ ಪ್ರತಾಪ ರೆಡ್ಡಿ ಆರೋಪಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎಸ್ಡಬ್ಲ್ಯು ಅನೇಕ ನೌಕರರನ್ನು ಏಕಾಏಕಿ ವಜಾ ಮಾಡುತ್ತಿದೆ. ಮನೆಗಳಿಗೆ ಪತ್ರ ಕಳುಹಿಸಿ, ದೂರವಾಣಿ ಕರೆ ಮಾಡಿ, ಇ-ಮೇಲ್ ಮೂಲಕ ವಜಾ ಮಾಡಿದ ಕುರಿತು ಮಾಹಿತಿ ನೀಡುತ್ತಿದೆ. ಕೊರೊನಾ ಹಾವಳಿಯ ಇಂತಹ ಸಂದರ್ಭದಲ್ಲಿ ಉದಾತ್ತವಾಗಿ ವರ್ತಿಸಬೇಕಿದ್ದ ಕಂಪನಿ ಈಗ ಅತ್ಯಂತ ಅಮಾನವೀಯವಾಗಿ ವರ್ತಿಸುತ್ತಿದೆ. ತಕ್ಷಣ ಅಧಿಕಾರಿಗಳು ಈ ಧೋರಣೆ ಬದಲಾಯಿಸಿಕೊಳ್ಳಬೇಕು ಎಂದರು.
ಕೊರೊನಾ ಭಯಕ್ಕೆ ಅನೇಕರು ಸರಿಯಾಗಿ ಕೆಲಸಕ್ಕೆ ಹೋಗುತ್ತಿಲ್ಲ. ಅಂತಹವರ ಮನೆಗೆ ಪತ್ರ ಕಳುಹಿಸುವ ಸಂಸ್ಥೆ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸುತ್ತಿದೆ. ಇನ್ನು ಕೆಲವರಿಗೆ ದೂರವಾಣಿ ಕರೆ ಮಾಡಿ ನಿಗದಿತ ದಿನಾಂಕದಂದು ಕಚೇರಿಗೆ ಬಂದು ರಾಜೀನಾಮೆ ಪತ್ರಕ್ಕೆ ಸಹಿ ಮಾಡುವಂತೆ ತಿಳಿಸುತ್ತಿದ್ದಾರೆ. ಕೆಲವರಿಗೆ ಇ-ಮೇಲ್ ಮೂಲಕ ಟರ್ಮಿನೇಟ್ ಮಾಡಿದ ಕುರಿತು ಪತ್ರ ಕಳುಹಿಸುತ್ತಿದ್ದಾರೆ. ಇದು ಅತ್ಯಂತ ಅಮಾನವೀಯ. ಇಂತಹ ಸಂದರ್ಭದಲ್ಲಿ ಸಂಸ್ಥೆ ತನ್ನ ನೌಕರರ ಪರ ನಿಲ್ಲಬೇಕಿತ್ತು. ಆದರೆ ಈಗ ಅವರನ್ನು ಬೀದಿಗೆ ತರುವ ಕೆಲಸ ಮಾಡುತ್ತಿದೆ ಎಂದು ಕುಟುಕಿದರು.