ಬಳ್ಳಾರಿ: ಹಿಂಡಲಗಾ ಜೈಲಿನಲ್ಲಿರುವ ಜೆ.ಹೆಚ್. ಪೂಜಾರ ಎಂಬಾತನನ್ನು ಪ್ರಕರಣವೊಂದರಲ್ಲಿ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಈತ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂಬ ಬಗ್ಗೆ ಈಗಷ್ಟೇ ಮಾಹಿತಿ ಸಿಕ್ಕಿದೆ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದರು. ಬಳ್ಳಾರಿ ನಗರದ ಖಾಸಗಿ ಹೊಟೇಲ್ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಚಾರ ಕೇಳಿ ನನಗೆ ಆಘಾತವಾಯಿತು. ಇದೇ ಆರೋಪಿ ಈ ಹಿಂದೆ ನಿತಿನ್ ಗಡ್ಕರಿ ಅವರ ಕೊಲೆಗೆ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ನನಗೆ ಫೋನ್ ಮಾಡಿ ತಿಳಿಸಿದರು ಎಂದರು.
ನಾನು ಹಿಂದುತ್ವ ಪ್ರತಿಪಾದಿಸಿ ಮಾತನಾಡಿದಾಗ ಹಿಂದೊಮ್ಮೆ ನನಗೆ ಕೊಲೆ ಬೆದರಿಕೆ ಬಂದಿತ್ತು. ಈ ವಿಷಯವನ್ನು ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಭದ್ರತೆ ನೀಡಿದ್ದರು ಎಂದು ಹೇಳಿದ ಅವರು, ನನ್ನ ಕೊಲೆಗೆ ಸ್ಕೆಚ್ ಹಾಕಲು ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾನು ಹೆದರುವವರಲ್ಲ ಎಂದು ಹೇಳಿದರು.
ಚುನಾವಣಾ ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿ, ಮೊನ್ನೆ ರಾಜ್ಯದ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್ ಅವರು ಫೋನ್ ಮಾಡಿ ಮಾತನಾಡಿದರು. ನೀವು ಚುನಾವಣಾ ರಾಜಕೀಯಕ್ಕೆ ರಾಜೀನಾಮೆ ಎಂಬ ರೀತಿಯಲ್ಲಿ ರಾಜೀನಾಮೆ ಕಳುಹಿಸಬಾರದು ಎಂದು ತಿಳಿಸಿದರು. ಫಾರ್ಮ್ಯಾಟ್ ಕಳಿಸುವಂತೆ ಹೇಳಿದೆ. ಅವರು ಕಳಿಸಿದ ಫಾರ್ಮ್ಯಾಟ್‌ನಲ್ಲಿ ರಾಜೀನಾಮೆ ಪತ್ರ ಕಳಿಸುತ್ತೇನೆ ಎಂದರು.