ಬಳ್ಳಾರಿ :ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಮೊದಲೇ ಹೇಳಿದ್ದು, ಇದೀಗ ಬೆಳಕಿಗೆ ಬಂದಿದೆ. ಇವರಿಬ್ಬರ ಮೈತ್ರಿ ಉತ್ತರ ಕರ್ನಾಟಕದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.
ಜನತಾ ದರ್ಶನ ಕಾರ್ಯಕ್ರಮಕ್ಕೂ ಮುನ್ನ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿರುದ್ಧ ಹರಿಹಾಯ್ದರು. ಇವರಿಬ್ಬರ ಮೈತ್ರಿ ಉತ್ತರ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಕೇವಲ ಮೂರು ನಾಲ್ಕು ಸ್ಥಾನದಲ್ಲಿ ಪರಿಣಾಮ ಬೀರಬಹುದು ಅಷ್ಟೇ ಎಂದರು. ಎರಡು ಪಕ್ಷವನ್ನು ಮೆಟ್ಟಿ ನಿಂತು ರಾಜ್ಯದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನ ಗೆಲ್ಲುತ್ತೇವೆ ಎಂದು ಸಚಿವ ನಾಗೇಂದ್ರ ತಿಳಿಸಿದರು.
ಜೆಡಿಎಸ್ ಬಿಟ್ಟು ಬರುವವರಿಗೆ ನೇರವಾದ ಆಹ್ವಾನ ನೀಡಿದ ಸಚಿವ ನಾಗೇಂದ್ರ ಅವರು, ಜಾತ್ಯತೀತ ಪಕ್ಷ ಎಂದು ಯಾರು ಯಾರು ಸೇರಿದ್ದಾರೆ ಅಂತ ಎಲ್ಲರಿಗೂ ಗೊತ್ತಾಗಿದೆ. ಕೋಮುವಾದಿ ಪಕ್ಷದ ಜೊತೆಗೆ ಹೋದಾಗ ಜೆಡಿಎಸ್ ನಿಲುವು ಜನರಿಗೆ ಗೊತ್ತಾಗಿದೆ. ಸಿಎಂ ಇಬ್ರಾಹಿಂ ಪಕ್ಷ ಬಿಡುವ ವಿಚಾರ ಅವರ ಸಾಮಾಜಿಕ ಕಳಕಳಿ ಮತ್ತು ನಿಲುವು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಇಬ್ರಾಹಿಂ ಸೇರಿದಂತೆ ಯಾರೇ ಬಂದರೂ ಸ್ವಾಗತವಿದೆ ಎಂದು ಬಿ. ನಾಗೇಂದ್ರ ಅವರು ಸ್ಪಷ್ಟಪಡಿಸಿದರು.
ಇನ್ನು ಮುಂದಿನ ಲೋಕಸಭೆ ಚುನಾವಣೆ ಕುರಿತಂತೆ ಮಾತನಾಡಿದ ಸಚಿವ ನಾಗೇಂದ್ರ ಅವರು, ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಚಿವ ಶಾಸಕರನ್ನು ಕಣಕ್ಕಿಳಿಸುವ ವಿಚಾರ ಪಕ್ಷದ ನಿರ್ಧಾರಕ್ಕೆ ಬಿಟ್ಟದ್ದು ಎಂದ ಅವರು, ಇರುವ ಶಾಸಕ, ಸಚಿವರನ್ನು ಯಾಕೆ ಕಣಕ್ಕೆ ನಿಲ್ಲಿಸಬೇಕು? ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ. ಎಲ್ಲರೂ ಶಕ್ತಿವಂತರಾಗಿದ್ದಾರೆ. ಅವಕಾಶ ವಂಚಿತರಿಗೆ ಟಿಕೆಟ್ ನೀಡಲು ಎಐಸಿಸಿ ವರಿಷ್ಠರು ಮತ್ತು ರಾಜ್ಯ ನಾಯಕರು ಯೋಚನೆ ಮಾಡುತ್ತಿದ್ದಾರೆ. ಸಿಎಂ ಸೇರಿದಂತೆ 34 ಸಚಿವರು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಉಪ ಚುನಾವಣೆ ಮಾಡಲು ಕಾಂಗ್ರೆಸ್ಗೆ ಇಷ್ಟವಿಲ್ಲ. ಜನರ ಮೇಲೆ ಹೊರೆ ಹಾಕುವುದಿಲ್ಲ. ಯಾವುದೇ ಕಾರಣಕ್ಕೂ ಹೆಚ್ಚುವರಿ ಉಪಮುಖ್ಯಮಂತ್ರಿ ಬೇಡ. ಒಬ್ಬರೇ ಇರಲಿ. ಪಕ್ಷದ ತೀರ್ಮಾನದಂತೆ ಒಬ್ಬರೇ ಸಿಎಂ, ಒಬ್ಬರೇ ಡಿಸಿಎಂ ಇರುತ್ತಾರೆ. ಸಿಎಂ, ಡಿಸಿಎಂ ಅವರದ್ದು ಒಳ್ಳೆಯ ಕಾಂಬಿನೇಷನ್ ಇದೆ. ರಾಜಣ್ಣ, ರಾಯರೆಡ್ಡಿ ಯಾರಾದ್ರೂ ಕೇಳಬಹುದು. ಎಲ್ಲಾ ಸಿಎಂ ಮತ್ತು ಡಿಸಿಎಂ ನಿರ್ಧಾರಕ್ಕೆ ಬಿಟ್ಟದ್ದು. ನನ್ನ ನಿಲುವು ಮಾತ್ರ ಒಂದೇ, ಒಬ್ಬರೇ ಡಿಸಿಎಂ ಸಾಕು ಎನ್ನುವುದು ಎಂದರು.
ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು : ಮುಖ್ಯಮಂತ್ರಿಯವರ ಆಶಯದಂತೆ, ಸಾರ್ವಜನಿಕರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುವ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಕರೆ ನೀಡಿದರು.
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಇಂದು ಏರ್ಪಡಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಸ್ಥಳದಲ್ಲಿಯೇ ಪರಿಹಾರ ನೀಡುವ “ಜನತಾ ದರ್ಶನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ರಾಜ್ಯ ಸರ್ಕಾರದ ಆಡಳಿತ ಯಂತ್ರ ಚುರುಕುಗೊಳಿಸಲು, ಮುಖ್ಯಮಂತ್ರಿಗಳ ನಿರ್ದೇಶನದಂತೆ ಪ್ರತಿ ತಿಂಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಬೇಕು ಎಂದು ರಾಜ್ಯ ಸರ್ಕಾರ ಈ ವಿಶೇಷ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದರು.