ಬಳ್ಳಾರಿ :ಹಿರಿಯ ಚಿತ್ರನಟಿ ಜಯಂತಿ ನಿಧನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣನವರು ಕಂಬಿನಿ ಮಿಡಿದಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಎನ್.ತಿಪ್ಪಣ್ಣ ಅವರು, ಹಿರಿಯ ಚಿತ್ರನಟಿ ಜಯಂತಿ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ. ಸಿನಿಮಾ ರಂಗಕ್ಕೆ ತುಂಬಾ ನಷ್ಟ ಆಗಿದೆ. ಅವರು ಬಳ್ಳಾರಿಯವರು ಅನ್ನೋದಕ್ಕೆ ಹೆಮ್ಮೆ ಪಡುತ್ತಿದ್ದೆವು ಎಂದು ಬೇಸರ ವ್ಯಕ್ತಪಡಿಸಿದರು.
ಚಂದನವನದ ಹಿರಿಯ ನಟಿ ಜತೆಗಿನ ಒಡನಾಟ ಸ್ಮರಿಸಿದ ಎನ್ ತಿಪ್ಪಣ್ಣ ಜಯಂತಿ ತಾಯಿ ಬಳ್ಳಾರಿಯಲ್ಲಿಯೇ ಇದ್ದರು. ಚಿಕ್ಕ ವಯಸ್ಸಿನಲ್ಲಿ ಅವರ ತಾಯಿ ಜಯಂತಿಯನ್ನ ಮದ್ರಾಸ್ಗೆ ಕರೆದುಕೊಂಡು ಹೋಗಿದ್ದರು. ಮದ್ರಾಸ್ನಲ್ಲಿ ಸಂಗೀತ, ನೃತ್ಯ, ನಟನೆಯ ತರಬೇತಿ ಪಡೆದರು. ಮದ್ರಾಸ್ನಿಂದ ಬೆಂಗಳೂರಿಗೆ ಬಂದು ಅಲ್ಲೇ ನೆಲೆಸಿದ್ದರು. ಬಳ್ಳಾರಿಗೆ ಬಂದಾಗ ನಮ್ಮ ಮನೆಯಲ್ಲಿ ಉಳಿಯುತ್ತಿದ್ದರು ಎಂದು ಹೇಳಿದರು.
ಸಿರುಗುಪ್ಪ ತಾಲೂಕಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದರು. ಆಕೆಗೊಂದು ಸಣ್ಣ ಅಪಘಾತವಾಗಿತ್ತು. ಆಗ ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದೆ. ನಾನು ಕೂಡ ಬೆಂಗಳೂರಿಗೆ ಹೋದಾಗ ಜಯಂತಿ ಅವರ ನಿವಾಸಕ್ಕೆ ಹೋಗುತ್ತಿದ್ದೆ. ಜಯಂತಿ ಅವರು ಸರಿ ಸುಮಾರು 50 ವರ್ಷಗಳಿಂದ ನಮಗೆ ಪರಿಚಯ. ಅವರದು ಬಳ್ಳಾರಿಯಲ್ಲಿ ಮನೆ ಎಲ್ಲಿತ್ತು ಅನ್ನೋದು ಗೊತ್ತಿಲ್ಲ ಎಂದು ತಿಪ್ಪಣ್ಣ ತಿಳಿಸಿದರು.
ಓದಿ: ಅಭಿನಯ ಶಾರದೆಯ ಅಗಲಿಕೆಯ ಬಗ್ಗೆ ಕನ್ನಡ ಚಿತ್ರ ರಂಗದ ಹಿರಿಯ ನಟರ ಮಾತುಗಳು